ಮುದೂರು: ಸ್ಮಶಾನ ಇಲ್ಲದೆ ಮನೆಯಂಗಳದಲ್ಲಿಯೇ ಶವಸಂಸ್ಕಾರ

ಕುಂದಾಪುರ, ಮೇ 11: ಸೂಕ್ತ ರುದ್ರಭೂಮಿ ಇಲ್ಲದೆ ಬಡ ಕುಟುಂಬವೊಂದು ತಮ್ಮ ಮನೆಯಂಗಳದಲ್ಲಿಯೇ ಶವಸಂಸ್ಕಾರ ನೆರವೇರಿಸಿದ ಘಟನೆ ಜಡ್ಕಲ್ ಗ್ರಾಪಂ ವ್ಯಾಪ್ತಿಯ ಮುದೂರು ಗ್ರಾಮದ ಉದಯನಗರ ಸಮೀಪದ ಗುಂಡನ ಹೊಳೆ ಎಂಬಲ್ಲಿ ಜ.11ರಂದು ನಡೆದಿದೆ.
ಗುಂಡನಹೊಳೆಯ ಕೈಲಾಸ್ ಎಂಬವರು ಅನಾರೋಗ್ಯದಿಂದ ಮೃತಪಟ್ಟಿದ್ದು, ಗ್ರಾಮದಲ್ಲಿ ಶವಸಂಸ್ಕಾರಕ್ಕೆ ಸೂಕ್ತ ರುದ್ರಭೂಮಿಯ ವ್ಯವಸ್ಥೆ ಇಲ್ಲದೆ ಇರುವು ದರಿಂದ ಬಡ ಕುಟುಂಬ ತನ್ನ ಮನೆಯಂಗಳದಲ್ಲಿಯೇ ಶವಸಂಸ್ಕಾರವನ್ನು ನೆರ ವೇರಿಸಿರುವುದು ತಿಳಿದುಬಂದಿದೆ.
ಜಡ್ಕಲ್ ಹಾಗೂ ಮುದೂರು ಗ್ರಾಮದಲ್ಲಿ ಸ್ಮಶಾನ ಭೂಮಿಗಾಗಿ ಸರ್ವೆ ನಂಬರ್ 108ರಲ್ಲಿ ಸ್ಥಳ ಕಾದಿರಿಸಿರುವ ಬಗ್ಗೆ ಪಹಣಿ ಪತ್ರ ದಾಖಲಾಗಿದೆ. ಆದರೂ ಕೂಡ ಸ್ಥಳ ಗುರುತಿಸಿ ಸಾರ್ವಜನಿಕರ ಉಪಯೋಗಕ್ಕೆ ಸ್ಮಶಾನ ನಿರ್ಮಿ ಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಿಲ್ಲ. ಇದರಿಂದ ಇಂತಹ ಅಮಾನವೀಯ ಘಟನೆಗಳು ನಡೆಯುತ್ತಿವೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ವಾಸುದೇವ ಮುದೂರು ಆರೋಪಿಸಿದ್ದಾರೆ.
ಕೊರೋನಗೆ ಸಾಕಷ್ಟು ಸಂಖ್ಯೆಯಲ್ಲಿ ಜನ ಬಲಿಯಾಗುತ್ತಿರುವ ಇಂತಹ ಸಂದರ್ಭದಲ್ಲಿ ಜಿಲ್ಲಾಡಳಿತ ನೇರವಾಗಿ ಸ್ಪಂದಿಸಿ ಸ್ಮಶಾನ ನಿರ್ಮಾಣಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ವಾಸುದೇವ ಮುದೂರು ಒತ್ತಾಯಿಸಿದ್ದಾರೆ.





