ನ್ಯಾಯಬೆಲೆ ಅಂಗಡಿಯಿಂದ ರೇಷನ್ ತರಲು ಅನುಮತಿ: ಶಾಸಕ ಕಾಮತ್
ಮಂಗಳೂರು, ಮೇ 11: ಲಾಕ್‌ಡೌನ್ ಸಂದರ್ಭ ನಗರದ ನ್ಯಾಯಬೆಲೆ ಅಂಗಡಿಯಿಂದ ರೇಷನ್ ಪಡೆದುಕೊಳ್ಳುವವರಿಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.
ಕೋವಿಡ್ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ಲಾಕ್‌ಡೌನ್ ಸಂದರ್ಭ ನ್ಯಾಯಬೆಲೆ ಅಂಗಡಿಯಿಂದ ರೇಷನ್ ತರಲು ಯಾವುದೇ ರೀತಿಯ ಸಮಸ್ಯೆ ಇಲ್ಲ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಯ ಜೊತೆ ಈಗಾಗಲೇ ಮಾತನಾಡಿದ್ದೇನೆ. ರೇಷನ್ ಅಂಗಡಿಗಳಲ್ಲಿ ಸಾಮಾಗ್ರಿ ಪಡೆಯುವ ಸಮಯದಲ್ಲಿ ಸ್ವಲ್ಪ ಬದಲಾವಣೆಯಾದರೂ ಪೊಲೀಸರು ಗ್ರಾಹಕರ ಜೊತೆ ಉತ್ತಮ ರೀತಿಯಲ್ಲಿ ಸ್ಪಂದಿಸಲು ಸೂಚನೆ ನೀಡಲಾಗಿದ್ದು, ಸಾರ್ವಜನಿಕರು ಪಡಿತರ ಚೀಟಿ ತೋರಿಸಿ ಹೋಗಬಹುದು ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.
ನಗರದ ಪ್ರತಿ ನ್ಯಾಯಬೆಲೆ ಅಂಗಡಿಗಳು ಬೆಳಗ್ಗೆ 7 ರಿಂದ 10 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತದೆ. ಬೆಳಗ್ಗೆ 7 ಗಂಟೆಗೆ ನ್ಯಾಯಬೆಲೆ ಅಂಗಡಿಯಲ್ಲಿ ಮೊದಲ 150 ಜನರಿಗೆ ಕ್ಯೂಸ್ಲಿಪ್ ನೀಡಲಾಗುವುದು. ಅದನ್ನು ಪಡೆದವರಿಗೆ ಪಡಿತರ ವಿತರಿಸಲಾಗುತ್ತದೆ. ಪ್ರತಿ ತಿಂಗಳ ಪಡಿತರವನ್ನು ತಿಂಗಳ ಕೊನೆಯ ದಿನದವರೆಗೂ ವಿತರಿಸಲಾಗುವುದು. ಈ ಕುರಿತು ಯಾವುದೇ ರೀತಿಯ ಗೊಂದಲ ಬೇಡ. ಪಡಿತರ ಹಂಚಿಕೆ ಸಂದರ್ಭ ಓರ್ವ ಪೊಲೀಸ್ ಸಿಬ್ಬಂದಿಯನ್ನು ನೇಮಿಸುವಂತೆ ಇಲಾಖೆಗೆ ಸೂಚಿಸಲಾಗಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.







