ಅಲಿಗಢ ಮುಸ್ಲಿಂ ವಿವಿ: ಕೋವಿಡ್ ನಿಂದ 44 ಸಿಬ್ಬಂದಿ ಮೃತ್ಯು, ಜೆನೋಮ್ ಸೀಕ್ವೆನ್ಸಿಂಗ್‌ಗೆ ಮನವಿ
ಅಲಿಗಡ (ಉ.ಪ್ರ), ಮೇ 11: ಇತ್ತೀಚಿನ ದಿನಗಳಲ್ಲಿ 19 ಬೋಧಕರು ಮತ್ತು 25 ಶಿಕ್ಷಕೇತರ ಸಿಬ್ಬಂದಿಗಳು ಸೇರಿದಂತೆ ಅಲಿಗಡ ಮುಸ್ಲಿಂ ವಿವಿ (ಅಮು)ಯ 44 ಉದ್ಯೋಗಿಗಳು ಕೋವಿಡ್-19ರಿಂದ ಸಾವನ್ನಪ್ಪಿದ್ದು, ಇನ್ನಷ್ಟು ಪ್ರಕರಣಗಳು ಮತ್ತು ಸಾವುಗಳು ಉಂಟಾಗುವ ಕಳವಳವನ್ನು ಹೆಚ್ಚಿಸಿದೆ.
ಮಾರಣಾಂತಿಕ ಪ್ರಭೇದದಿಂದಾಗಿ ಈ ಸಾವುಗಳು ಸಂಭವಿಸಿವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಗೆ ಬರೆದಿರುವ ಪತ್ರದಲ್ಲಿ ತಿಳಿಸಿರುವ ಅಮು ಕುಲಪತಿ ತಾರಿಕ್ ಮನ್ಸೂರ್ ಅವರು,ಈ ಪ್ರಭೇದದ ಜೆನೋಮ್ ಸೀಕ್ವೆನ್ಸಿಂಗ್ ಅಥವಾ ಆನುವಂಶಿಕ ಕ್ರಮಾನುಗತಿ(ವಿಶ್ಲೇಷಣೆ)ಯನ್ನು ನಡೆಸುವಂತೆ ಕೋರಿಕೊಂಡಿದ್ದಾರೆ.
ಇದು ಅಮು ಮತ್ತು ಇತರ ಹಲವಾರು ನೆರೆಯ ಬಡಾವಣೆಗಳಿರುವ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ನಿರ್ದಿಷ್ಟ ವೈರಸ್ ಪ್ರಭೇದವೊಂದು ಹರಿದಾಡುತ್ತಿದೆ ಎಂಬ ಶಂಕೆಯನ್ನು ಮೂಡಿಸಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ನಿರ್ದಿಷ್ಟ ಪ್ರಭೇದ/ಪ್ರಭೇದಗಳನ್ನು ಗುರುತಿಸಲು ಜೆನೋಮ್ ಸೀಕ್ವೆನ್ಸಿಂಗ್ ಗಾಗಿ ಸ್ಯಾಂಪಲ್ಗಳನ್ನು ಸಿಎಸ್ಐಆರ್ನ ಇನ್ಸ್ಟಿಟ್ಯೂಟ್ ಆಫ್ ಜೆನೊಮಿಕ್ಸ್ ಆ್ಯಂಡ್ ಇಂಟಿಗ್ರೇಟಿವ್ ಬಯಾಲಜಿಗೆ ಕಳುಹಿಸಲಾಗಿದೆ.
ವಿವಿಯ ದಫನ ಭೂಮಿಯು ಈಗ ಭರ್ತಿಯಾಗಿದೆ. ಇದೊಂದು ಘೋರ ದುರಂತವಾಗಿದೆ. ಓರ್ವ ಡೀನ್ ಮತ್ತು ಚೇರಮನ್ ಸೇರಿದಂತೆ ಹಲವಾರು ಖ್ಯಾತ ವೈದ್ಯರು ಮತ್ತು ಹಿರಿಯ ಬೋಧಕರು ಕೊರೋನದಿಂದ ಸಾವನ್ನಪ್ಪಿದ್ದಾರೆ. ಆರೋಗ್ಯವಂತರಾಗಿದ್ದ ಯುವಜನರೂ ಮೃತಪಟ್ಟಿದ್ದಾರೆ ಎಂದು ರಾಜಕೀಯ ವಿಜ್ಞಾನ ವಿಭಾಗದ ಪ್ರೊಫೆಸರ್ ಡಾ.ಅರ್ಷಿ ಖಾನ್ ಹೇಳಿದರು.
ಮೊದಲ ಕೊರೋನ ಅಲೆಯು ಅಪ್ಪಳಿಸಿದ ಸಂದರ್ಭದಲ್ಲಿ ವಿವಿಯು ಸ್ಥಳೀಯ ಸಮುದಾಯಕ್ಕೆ ನೆರವಾಗುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿತ್ತು. ಆದರೆ ಈ ಸಲ ಪರಿಸ್ಥಿತಿ ತುಂಬ ಕೆಟ್ಟದ್ದಾಗಿದೆ. ಸಾವಿನ ದರ ಅತಿಯಾಗಿದೆ ಮತ್ತು ಇದು ಭಾರೀ ಕಳವಳಕ್ಕೆ ಕಾರಣವಾಗಿದೆ ಎಂದು ಅಮು ವಕ್ತಾರ ಶಫಿ ಕಿದ್ವಾಯಿ ತಿಳಿಸಿದರು.
ವಿವಿಯಲ್ಲಿ ಸುಮಾರು 30,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು,ಈ ಪೈಕಿ ಸುಮಾರು 16,000 ವಿದ್ಯಾರ್ಥಿಗಳು 19 ಹಾಸ್ಟೆಲ್ಗಳಲ್ಲಿ ವಾಸವಾಗಿದ್ದಾರೆ. ಈ ಹಿಂದೆ ವಿವಿಯನ್ನು ಮುಚ್ಚಿದ್ದಾಗಲೂ ಕೆಲವು ವಿದ್ಯಾರ್ಥಿಗಳು ಹಾಸ್ಟೆಲ್ಗಳಲ್ಲಿಯೇ ಉಳಿದಿದ್ದರು,ಆದರೆ ಈಗ ಹಾಸ್ಟೆಲ್ಗಳು ಖಾಲಿಯಾಗುತ್ತಿವೆ. ಪಿಎಚ್ಡಿ ಅಧ್ಯಯನ ನಡೆಸುತ್ತಿರುವ 50ರಿಂದ 60 ವಿದ್ಯಾರ್ಥಿಗಳು ಈಗ ಅನಿವಾರ್ಯವಾಗಿ ಇಲ್ಲಿ ಉಳಿದುಕೊಂಡಿದ್ದಾರೆ ಎಂದು ಸಂಶೋಧನಾ ವಿದ್ಯಾರ್ಥಿ ಸಲ್ಮಾನ್ ಕಮರ್ ಹೇಳಿದರು.







