ಕೋವಿಡ್ ಲಸಿಕೆ ಖರೀದಿಸಲು ಜಾಗತಿಕ ಟೆಂಡರ್ ಮಾರ್ಗ ಹಿಡಿದ ಕರ್ನಾಟಕ, ದಿಲ್ಲಿ,ಮಹಾರಾಷ್ಟ್ರ

ಹೊಸದಿಲ್ಲಿ: ದೇಶೀಯ ಲಸಿಕೆಗೆ ಭಾರೀ ಬೇಡಿಕೆ ವ್ಯಕ್ತವಾದ ಕಾರಣ ಜನರ ನಿರೀಕ್ಷೆಯಷ್ಟು ಪೂರೈಕೆ ಮಾಡಲು ವಿಫಲವಾಗಿರುವ ಕೆಲವು ರಾಜ್ಯಗಳು ಕೋವಿಡ್ ಲಸಿಕೆ ಖರೀದಿಸಲು ಜಾಗತಿಕ ಟೆಂಡರ್ ಕರೆಯುವ ಮಾರ್ಗ ಹಿಡಿದಿವೆ. ಇದೀಗ ಈ ಸಾಲಿಗೆ ಕರ್ನಾಟಕ, ದಿಲ್ಲಿ ಸಹಿತ ದಕ್ಷಿಣ ಭಾರತದ ರಾಜ್ಯಗಳು ಸೇರಿಕೊಂಡಿವೆ.
ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಮಧ್ಯೆ ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಒಡಿಶಾ ಈಗಾಗಲೇ ಈ ಆಯ್ಕೆಯನ್ನು ಆರಿಸಿಕೊಂಡಿವೆ.
ಇದುವರೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 18 ಕೋಟಿಗೂ ಅಧಿಕ ಡೋಸ್ ಗಳನ್ನು ಉಚಿತವಾಗಿ ನೀಡಲಾಗಿದೆ. ಮುಂದಿನ ಮೂರು ದಿನಗಳಲ್ಲಿ 7,29,610 ಹೆಚ್ಚುವರಿ ಡೋಸನ್ನು ಸ್ವೀಕರಿಸಲಿವೆ ಎಂದು ಕೇಂದ್ರ ಸರಕಾರ ಹೇಳಿದೆ.
"90 ಲಕ್ಷಕ್ಕೂ ಹೆಚ್ಚು ಕೋವಿಡ್ ಲಸಿಕೆ ಡೋಸ್ ಗಳು ಇನ್ನೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿವೆ" ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಅನೇಕ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಇನ್ನೂ ತುಂಬಾ ಲಸಿಕೆಯ ಕೊರತೆಯನ್ನು ಎದುರಿಸುತ್ತಿವೆ. ಲಸಿಕೆಯ ಪರಿಣಾಮಕಾರಿತ್ವವನ್ನು ಕಳೆದು ಕೊಳ್ಳಬಾರದೆಂಬ ಕಾರಣಕ್ಕೆ ಅನೇಕರು ಮೊದಲಿಗಿಂತ ಎರಡನೆಯ ಡೋಸ್ ಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.
"ಇಲ್ಲಿಯವರೆಗೆ, ನಾವು ಕೇಂದ್ರದಿಂದ ಒದಗಿಸಲಾದ ಲಸಿಕೆಗಳನ್ನು ಮಾತ್ರ ಅವಲಂಬಿಸಿದ್ದೇವೆ ... ಈಗ, ಜಾಗತಿಕ ಟೆಂಡರ್ ಕರೆದು ಏಳು ದಿನಗಳಲ್ಲಿಆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಮಗೆ ಸೂಚನೆ ನೀಡಲಾಗಿದೆ" ಎಂದು ಕರ್ನಾಟಕ ಉಪ ಮುಖ್ಯಮಂತ್ರಿ ಹಾಗೂ ರಾಜ್ಯ ಕೋವಿಡ್ ಕಾರ್ಯಪಡೆಯ ಮುಖ್ಯಸ್ಥ ಡಾ. ಸಿ.ಎನ್.ಅಶ್ವತ್ ನಾರಾಯಣ್ ಹೇಳಿದ್ದಾರೆ.
ಕರ್ನಾಟಕ ರಾಜ್ಯವು 18-44 ವರ್ಷದೊಳಗಿನವರಿಗೆ ಲಸಿಕೆ ನೀಡಲು ಎರಡು ಕೋಟಿ ಡೋಸ್ ಗಳನ್ನು ಖರೀದಿಸುತ್ತಿದೆ.