ಮಧ್ಯಪ್ರದೇಶದ ನದಿಯಲ್ಲೂ ಎರಡು ಮೃತದೇಹಗಳು ಪತ್ತೆ

ಸಾಂದರ್ಭಿಕ ಚಿತ್ರ
ಭೋಪಾಲ್: ಕೋವಿಡ್ನ ಎರಡನೇ ಅಲೆಯ ಮಧ್ಯೆ ಶವಗಳನ್ನು ಅಂತಿಮ ಕ್ರಿಯೆಗೆ ನೀಡುವ ಬದಲು ನದಿಗಳಲ್ಲಿ ಎಸೆಯುವ ಮಾನವ ದುರಂತ ಬಿಹಾರ ಹಾಗೂ ಉತ್ತರಪ್ರದೇಶದ ಬಳಿಕ ಈಗ ಮಧ್ಯಪ್ರದೇಶ ರಾಜ್ಯವನ್ನು ತಲುಪಿದೆ.
ರಾಜ್ಯದ ಪನ್ನಾ ಜಿಲ್ಲೆಯ ರಂಜ್ ನದಿಯ ದಡದಲ್ಲಿ ಮಂಗಳವಾರ ಎರಡು ಶವಗಳು ಪತ್ತೆಯಾಗಿವೆ. ಆದಾಗ್ಯೂ, ಈ ಪ್ರದೇಶದ ಹಿರಿಯ ಆಡಳಿತ ಅಧಿಕಾರಿಯೊಬ್ಬರು, ಶವಗಳು ಸ್ಥಳೀಯರಿದ್ದು, ಅವರಲ್ಲಿ ಒಬ್ಬರು ಕ್ಯಾನ್ಸರ್ ನಿಂದ ಮೃತಪಟ್ಟಿದ್ದರೆ, ಇನ್ನೊಬ್ಬರು ವೃದ್ಧಾಪ್ಯದಿಂದ ಮೃತಪಟ್ಟಿದ್ದರು ಎಂದು ಹೇಳಿದರು.
ಗ್ರಾಮದಲ್ಲಿ ದನಕರುಗಳಿಗೆ ಕುಡಿಯುವ ನೀರಿನ ಮೂಲವಾಗಿರುವ ರಂಜ್ ನದಿಯಲ್ಲಿ ನಾಲ್ಕೈದು ಶವಗಳು ಪತ್ತೆಯಾಗಿವೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.
"ಕಳೆದ ಐದ ರಿಂದ ಆರು ದಿನಗಳಿಂದ ನದಿಯಲ್ಲಿ ತೇಲುತ್ತಿರುವ ಈ ಶವಗಳಿಂದಾಗಿ ನಮ್ಮ ಹಳ್ಳಿಯಲ್ಲಿ ಸಾಂಕ್ರಾಮಿಕ ರೋಗ ಹರಡುವ ಭಯ ನಮ್ಮನ್ನು ಕಾಡುತ್ತಿದೆ" ಎಂದು ನಿವಾಸಿಯೊಬ್ಬರು ಹೇಳಿದರು.
ಪನ್ನಾ ಜಿಲ್ಲಾಧಿಕಾರಿ ಸಂಜಯ್ ಕುಮಾರ್ ಮಿಶ್ರಾ ಅವರು ಕೇವಲ ಎರಡು ಮೃತ ದೇಹಗಳಿದ್ದವೇ ಹೊರತು ನಾಲ್ಕರಿಂದ ಐದು ಮೃತ ದೇಹಗಳು ಇರಲಿಲ್ಲ ಎಂದಿದ್ದಾರೆ.
ಕಳೆದ ಎರಡು ದಿನಗಳಿಂದ ಬಿಹಾರ ಹಾಗೂ ಉತ್ತರ ಪ್ರದೇಶದ ಗಂಗಾ ನದಿಯ ದಡದಲ್ಲಿ ಹಲವಾರು ಮೃತದೇಹಗಳು ತೇಲಿಕೊಂಡು ಬಂದಿದ್ದವು. ಶವಗಳು ಕೋವಿಡ್ ರೋಗಿಗಳದ್ದಾಗಿರಬಹುದು ಎಂದು ಶಂಕಿಸಲಾಗಿದೆ.
ಬಿಹಾರದ ಬಕ್ಸಾರ್ ಜಿಲ್ಲೆಯಲ್ಲಿ 71 ಶವಗಳು ನದಿಯಲ್ಲಿ ತೇಲಿಬಂದಿತ್ತು. ಬಕ್ಸಾರ್ನಿಂದ 55 ಕಿ.ಮೀ ದೂರದ ಉತ್ತರ ಪ್ರದೇಶದ ಘಾಜಿಪುರದಲ್ಲಿ ಹೆಚ್ಚಿನ ಶವಗಳು ಪತ್ತೆಯಾಗಿವೆ.







