124 ಕ್ರೈಸ್ತ ಧರ್ಮಕ್ಷೇತ್ರಗಳಿಗೆ ಆಹಾರ ಕಿಟ್ ವಿತರಣೆ: ಮಂಗಳೂರು ಬಿಷಪ್‌ರಿಂದ ಚಾಲನೆ

ಮಂಗಳೂರು, 12: ಕೆಥೊಲಿಕ್ ಸಭಾ ಮಂಗಳೂರು ಪ್ರದೇಶದ ಆಶ್ರಯದಲ್ಲಿ ಮಂಗಳೂರು ಕ್ರೈಸ್ತ ಧರ್ಮಪ್ರಾಂತದ 124 ಧರ್ಮ ಕ್ಷೇತ್ರಗಳಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಬುಧವಾರ ಕೊಡಿಯಾಲ್‌ಬೈಲಿನ ಬಿಷಪ್ ಹೌಸ್ ಪ್ರಾಂಗಣದಲ್ಲಿ ಚಾಲನೆ ನೀಡಲಾಯಿತು.
ಕಿಟ್ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಮಂಗಳೂರು ಬಿಷಪ್ ವಂ. ಡಾ.ಪೀಟರ್ ಪಾವ್ಲ್ ಸಲ್ಡಾನ, ಜನರಿಗೆ ಆಹಾರ ಸಿಗಬೇಕೆಂಬ ಉದ್ದೇಶದಿಂದ ಕೆಥೊಲಿಕ್ ಸಭಾದ ಈ ಕಾರ್ಯಕ್ರಮದಿಂದ ಇನ್ನಷ್ಟು ಜನರಿಗೆ ಸಹಕಾರಿಯಾಗಲಿ ಎಂದು ಹಾರೈಸಿದರು.
ಕೆಥೊಲಿಕ್ ಸಭಾ ಮಂಗಳೂರು ಪ್ರದೇಶದ ಕೇಂದ್ರೀಯ ಅಧ್ಯಕ್ಷ ಸ್ಟ್ಯಾನಿ ಲೋಬೋ ಸ್ವಾಗತಿಸಿ, ಪ್ರಥಮ ಹಂತದಲ್ಲಿ 1,080 ಹಾಗೂ ಎರಡನೆ ಹಂತದಲ್ಲಿ ಮತ್ತೆ 1,080 ಕಿಟ್‌ಗಳನ್ನು ವಿತರಿಸುವುದಾಗಿ ತಿಳಿಸಿದರು.
ಆಧ್ಯಾತ್ಮಿಕ ನಿರ್ದೇಶಕ ವಂ.ಫಾ. ಮ್ಯಾಥ್ಯೂ ವಾಸ್, ದಾಯ್ಜಿ ವರ್ಲ್ಡ್ ನ್ಯೂಸ್ ಸಂಪಾದಕ ವಾಲ್ಟರ್ ನಂದಳಿಕೆ, ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ, ನಿಯೋಜಿತ ಅಧ್ಯಕ್ಷ ರಾಜು ಸ್ಟೀಫನ್ ಡಿಸೋಜ, ಉಪಾಧ್ಯಕ್ಷ ಸ್ಟೀವನ್ ರೊಡ್ರಿಗಸ್, ಕೋಶಾಧಿಕಾರಿ ಮೆಲ್ರಿಡಾ ರೊಡ್ರಿಗಸ್, ವಲಯಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕೆಥೊಲಿಕ್ ಸಭಾ ಮಂಗಳೂರು ಪ್ರದೇಶದ ಪ್ರಧಾನ ಕಾರ್ಯದರ್ಶಿ ಅಲ್ಫೋನ್ಸ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
















