ಅಮೆರಿಕದ ವಿಮಾನ ನಿಲ್ದಾಣದಲ್ಲಿ ಭಾರತೀಯ ಪ್ರಯಾಣಿಕನ ಲಗೇಜ್ ನಲ್ಲಿ ಸಗಣಿ ಕೇಕ್ ಪತ್ತೆ!

photo: AP
ನ್ಯೂಯಾರ್ಕ್ : ಅಮೆರಿಕದ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ ಏಜೆಂಟರು ವಾಷಿಂಗ್ಟನ್ ಡಿಸಿಯ ಉಪನಗರದಲ್ಲಿರುವ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರತದಿಂದ ಬಂದಿದ್ದ ಪ್ರಯಾಣಿಕರ ಸಾಮಾನು ಸರಂಜಾಮುಗಳಲ್ಲಿ ಗೋವಿನ ಸಗಣಿಯಿಂದ ತಯಾರಿಸಿದ್ದ ಕೇಕ್ ಗಳನ್ನು ಪತ್ತೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಸುವಿನ ಸಗಣಿ ಕೇಕ್ ಅನ್ನು ಅಮೆರಿಕದಲ್ಲಿ ನಿಷೇಧಿಸಲಾಗಿದೆ. ಏಕೆಂದರೆ ಅವುಗಳು ಹೆಚ್ಚು ಸಾಂಕ್ರಾಮಿಕ ಕಾಲು ಮತ್ತು ಬಾಯಿ ರೋಗದ ಸಂಭಾವ್ಯ ವಾಹಕಗಳಾಗಿವೆ.
ಹಸುವಿನ ಕೇಕ್ ಗಳನ್ನು ನಾಶಪಡಿಸಲಾಗಿದೆ ಎಂದು ಅಮೆರಿಕದ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (ಸಿಬಿಪಿ) ಸೋಮವಾರ ತಿಳಿಸಿದೆ.
“ಎ. 4 ರಂದು ಏರ್ ಇಂಡಿಯಾ ವಿಮಾನದಿಂದ ಬಂದಿದ್ದ ಪ್ರಯಾಣಿಕನ ಸೂಟ್ ಕೇಸನ್ನು ಸಿಬಿಪಿ ಕೃಷಿ ತಜ್ಞರು ತಪಾಸಣೆ ನಡೆಸಿದ್ದಾಗ ಎರಡು ಹಸುವಿನ ಕೇಕ್ ಗಳನ್ನು ಪತ್ತೆ ಹಚ್ಚಿದ್ದಾರೆ "ಎಂದು ಮಾಧ್ಯಮ ಪ್ರಕಟನೆ ಸೋಮವಾರ ತಿಳಿಸಿದೆ.
"ಕಾಲು ಮತ್ತು ಬಾಯಿ ರೋಗವು ಜಾನುವಾರು ಮಾಲೀಕರು ಹೆಚ್ಚು ಭಯಪಡುವ, ಗಂಭೀರ ಆರ್ಥಿಕ ಪರಿಣಾಮಗಳನ್ನು ಬೀರುವ ಪ್ರಾಣಿಗಳ ಕಾಯಿಲೆಗಳಲ್ಲಿ ಒಂದಾಗಿದೆ ಹಾಗೂ ಇದು ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ನ ಕೃಷಿ ಸಂರಕ್ಷಣಾ ಕಾರ್ಯಾಚರಣೆಗೆ ನಿರ್ಣಾಯಕ ಬೆದರಿಕೆ ಯಾಗಿದೆ" ಎಂದು ಸಿಬಿಪಿಯ ಕ್ಷೇತ್ರ ಕಾರ್ಯಾಚರಣೆಗಳ ನಿರ್ದೇಶಕ ಕೀತ್ ಫ್ಲೆಮಿಂಗ್ ಹೇಳಿದರು.







