ಬಿಬಿಎಂಪಿ ಬೆಡ್ ಹಂಚಿಕೆ: ಸಂಸದ ತೇಜಸ್ವಿ ಸೂರ್ಯ ಸಲಹೆಗಳಿಗೆ ಆರೋಗ್ಯ ತಜ್ಞರಿಂದಲೇ ಟೀಕೆ

ಬೆಂಗಳೂರು: ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಸೋಮವಾರ ಬಿಬಿಎಂಪಿಯ ಬೆಡ್ ಹಂಚಿಕೆ ಸಾಫ್ಟ್ ವೇರ್ ಕುರಿತಂತೆ ಘೋಷಿಸಿರುವ ಕೆಲವೊಂದು ಸುಧಾರಣೆಗಳು ಬಿಬಿಎಂಪಿ ಅಧಿಕಾರಿಗಳು ಹಾಗೂ ಆರೋಗ್ಯ ತಜ್ಞರಿಂದಲೇ ಟೀಕೆಗೆ ಗುರಿಯಾಗಿವೆಯಲ್ಲದೆ ಸಂಸದರು ಸೂಚಿಸಿದ ಸುಧಾರಣೆಗಳು ವಾಸ್ತವಕ್ಕೆ ಹೊಂದಿಕೊಳ್ಳದೇ ಇರುವುದರಿಂದ ಹಲವು ಕ್ರಮಗಳನ್ನು ಒಂದು ದಿನದೊಳಗಾಗಿ ಮಾರ್ಪಾಟು ಮಾಡಲಾಗಿದೆ.
ಬಿಬಿಎಂಪಿ ಬೆಡ್ ಹಂಚಿಕೆ ಪ್ರಕ್ರಿಯೆಯಲ್ಲಿ ಅವ್ಯವಹಾರಗಳು ನಡೆದಿವೆ ಎಂದು ಆರೋಪಿಸಿದ್ದ ಸಂಸದ ಸೋಮವಾರ ನಾಲ್ಕು ಸುಧಾರಣಾ ಕ್ರಮಗಳನ್ನು ಘೋಷಿಸಿ ಮುಂದಿನ ನಾಲ್ಕು ದಿನಗಳಲ್ಲಿ ಇನ್ನೂ ಎರಡು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದರು.
ರೋಗಿಗಳಿಗೆ ಟೋಕನ್ ನೀಡುವ ಕ್ಯೂ ವ್ಯವಸ್ಥೆ ಹೆಚ್ಚು ಟೀಕೆಗೆ ಗುರಿಯಾಗಿತ್ತು,. ಪ್ರತಿಯೊಂದು ವಿಭಾಗದ ಬೆಡ್ ಪಡೆಯಲು ಪ್ರತ್ಯೇಕ ಕ್ಯೂ ವ್ಯವಸ್ಥೆ ಬೇಕೆಂದು ಸೂರ್ಯ ಹೇಳಿದ್ದರು. ಒಬ್ಬ ರೋಗಿಯ ಪರಿಸ್ಥಿತಿ ಬಿಗಡಾಯಿಸಿದಲ್ಲಿ ಬೇರೊಂದು ಹೆಚ್ಚು ಸೌಕರ್ಯವಿರುವ ಬೆಡ್‍ಗೆ ವರ್ಗಾಯಿಸಲು ಆ ವಿಭಾಗದ ಕ್ಯೂಗೆ ಸೇರಿಸಲಾಗುವುದು ಎಂದು ಹೇಳಿದ್ದರು. ಆದರೆ ಈ ರೀತಿ ಕ್ಯೂ ವ್ಯವಸ್ಥೆ ಜಾರಿಗೊಳಿಸಿದರೆ ಹಲವು ಜೀವಗಳಿಗೆ ಅಪಾಯವಾಗಬಹುದು ಎಂದು ತಜ್ಞರು ಹಾಗೂ ಬಿಬಿಎಂಪಿ ಅಧಿಕಾರಿಗಳು ಅಭಿಪ್ರಾಯಿಸಿದ್ದಾರೆ.
ಬೆಡ್ ಹಂಚಿಕೆಯಾದ ನಂತರ ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಅವಧಿಯನ್ನು ಈಗಿನ 10 ಗಂಟೆಗಳಿಂದ ನಾಲ್ಕು ಗಂಟೆಗಳಿಗೆ ಇಳಿಸಬೇಕೆಂದು ಸಂಸದ ಸಲಹೆ ನೀಡಿದ್ದರೂ ಈ ಅವಧಿಯನ್ನು ಆರು ಗಂಟೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ ಬೆಡ್ ಹಂಚಿಕೆಯಾದ ನಂತರ ರೋಗಿಗಳು ಆಸ್ಪತ್ರೆಗೆ ದಾಖಲಾಗಲು ಐದರಿಂದ ಆರು ಗಂಟೆ ತಗಲುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಅದೇ ಸಮಯ ಬೆಡ್ ಬ್ಲಾಕ್ ಮಾಡುವ ವ್ಯಕ್ತಿಯ ಹೆಸರು, ಬೆಡ್ ಹಂಚಿಕೆ ಕುರಿತು ರೋಗಿಗಳಿಗೆ ಹಾಗೂ ಆಸ್ಪತ್ರೆಗಳಿಗೆ ಆಟೋ ಜನರೇಟೆಡ್ ಎಸ್ಸೆಮ್ಮೆಸ್ ವ್ಯವಸ್ಥೆ ಹಾಗೂ ಡಿಸ್ಚಾರ್ಜ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕುರಿತ ಸಂಸದರ ಸಲಹೆಗಳನ್ನು ಸ್ವಾಗತಿಸಲಾಗಿದೆ.







