ಮಂಗಳೂರು: 'ತೌಕ್ತೆ' ಚಂಡಮಾರುತದ ಭೀತಿ; ಸಮುದ್ರದಿಂದ ಮರಳುವಂತೆ ಮೀನುಗಾರರಿಗೆ ಸೂಚನೆ

ಮಂಗಳೂರು, ಮೇ 12: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾದುದರ ಪರಿಣಾಮ 'ತೌಕ್ತೆ' ಚಂಡಮಾರುತದ ಭೀತಿ ಕಾಡತೊಡಗಿದೆ. ಹಾಗಾಗಿ ಮೀನುಗಾರಿಕೆಗೆ ತೆರಳಿರುವವರು ತಕ್ಷಣ ಮರಳಿ ಬರಬೇಕು ಮತ್ತು ಸದ್ಯ ಯಾರೂ ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ ಎಂದು ಕರಾವಳಿ ಕಾವಲು ಪಡೆ ಕಮಾಂಡರ್ ವೆಂಕಟೇಶ್ ತಿಳಿಸಿದ್ದಾರೆ.
ಮೇ 16ರ ವೇಳೆಗೆ ಪೂರ್ವ ಮಧ್ಯ ಅರಬ್ಬಿ ಸಮುದ್ರದಲ್ಲಿ ಬಿರುಗಾಳಿ ತೀವ್ರವಾಗಲಿದೆ. ಈ ಹಿನ್ನೆಲೆಯಲ್ಲಿ ದೋಣಿಗಳು ಮೀನುಗಾರಿಕೆಗೆ ಇಳಿಯಬಾರದು. ಈಗಾಗಲೇ ಮೀನುಗಾರಿಕೆಗೆ ತೆರಳಿರುವ ದೋಣಿಗಳು ದಡಕ್ಕೆ ಸೇರುವಂತೆ ಕರಾವಳಿ ಕಾವಲು ಪಡೆ ಸೂಚಿಸಿದೆ.
ಅಲ್ಲದೆ ಗಸ್ತು ತಿರುಗುತ್ತಿರುವ ಕರಾವಳಿ ಕಾವಲು ಪಡೆಯ ಹಡಗುಗಳು ಹಾಗೂ ವಿಮಾನಗಳ ಮೂಲಕ ಸಮುದ್ರದಲ್ಲಿರುವ ಮೀನುಗಾರರಿಗೆ ಹವಾಮಾನ ಎಚ್ಚರಿಕೆ ನೀಡಿ ಹತ್ತಿರದ ತೀರಕ್ಕೆ ಮರಳಲು ತಿಳಿಸಲಾಗುತ್ತಿದೆ. 'ತೌಕ್ತೆ' ಚಂಡಮಾರುತದಿಂದಾಗಿ ಕರ್ನಾಟಕದ ಕರಾವಳಿ, ಕೇರಳ, ತಮಿಳುನಾಡು, ಲಕ್ಷದ್ವೀಪಗಳಲ್ಲಿ ಮೇ 16ರವರೆಗೆ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.





