ಮಂಗಳೂರು: ಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್ಗಳಲ್ಲಿ ಸಿಗದ ಆಹಾರ

ಸಾಂದರ್ಭಿಕ ಚಿತ್ರ
ಮಂಗಳೂರು, ಮೇ 12: ಕೊರೋನ-ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಕಾರ್ಮಿಕರು, ದುರ್ಬಲ ವರ್ಗದವರಿಗೆ ಮೇ 12ರಿಂದ 24ರವರೆಗೆ ಇಂದಿರಾ ಕ್ಯಾಂಟೀನ್ಗಳ ಮೂಲಕ ಉಚಿತ ಆಹಾರ ನೀಡಲು ಸರಕಾರ ತೀರ್ಮಾನಿಸಿದ್ದರೂ ಕೂಡ ಮಂಗಳೂರು ನಗರ ಮತ್ತು ಹೊರವಲಯಗಳಲ್ಲಿರುವ ಇಂದಿರಾ ಕ್ಯಾಂಟೀನ್ಗಳು ಬುಧವಾರ ಕಾರ್ಯಾಚರಿಸಲಿಲ್ಲ.
ನಗರದ ಪಂಪ್ವೆಲ್, ಲೇಡಿಗೋಶನ್, ಉರ್ವಸ್ಟೋರ್, ಕಾವೂರು, ಸುರತ್ಕಲ್, ತೊಕ್ಕೊಟ್ಟಿನಲ್ಲಿ ಇಂದಿರಾ ಕ್ಯಾಂಟೀನ್ಗಳಿದ್ದು, ಲಾಕ್ಡೌನ್ ಬಳಿಕ ಅವು ಮುಚ್ಚಲ್ಪಟ್ಟಿತ್ತು. ಆದರೆ ಮೇ 12ರಿಂದ ಇಂದಿರಾ ಕ್ಯಾಂಟೀನ್ಗಳ ಮೂಲಕ ಕಾರ್ಮಿಕರು ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ದಿನದ ಮೂರು ಹೊತ್ತು (ಬೆಳಗ್ಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ) ನೀಡುವ ಬಗ್ಗೆ ರಾಜ್ಯ ಸರಕಾರ ಬುಧವಾರ ತೀರ್ಮಾನಿಸಿತ್ತು.
ಅರ್ಹರು ಮತದಾನದ ಗುರುತಿನ ಚೀಟಿ, ಆಧಾರ್ ಕಾರ್ಡ್, ವಾಹನ ಚಾಲನೆಯ ಪರವಾನಗಿ, ಕಾರ್ಮಿಕ ಇಲಾಖೆಯ ಗುರುತಿನ ಚೀಟಿ ಅಥವಾ ಸರಕಾರದಿಂದ ಅಧಿಕೃತ ಮಾನ್ಯತೆ ಪಡೆದ ಯಾವುದಾದರು ಗುರುತಿನ ಚೀಟಿ ತೋರಿಸಿ ಆಹಾರ ಪಡೆಯಬಹುದು ಎಂದು ಸೂಚಿಸಿತ್ತು. ಆದರೆ, ಮೇ 12ರಿಂದ ಜಿಲ್ಲೆಯ ಕ್ಯಾಂಟೀನ್ಗಳಲ್ಲೂ ಆಹಾರ ವಿತರಣೆ ಆಗಿಲ್ಲ.
ಬಿಲ್ ಬಾಕಿ, ಕೆಲಸಗಾರರ ಕೊರತೆ
ಕಳೆದ ಬಾರಿ ಲಾಕ್ಡೌನ್ ಆದಾಗ 10 ದಿನಗಳ ಕಾಲ ಸುಮಾರು 9,000 ಊಟ/ತಿಂಡಿಯನ್ನು ಪಾಲಿಕೆಯು ಇಂದಿರಾ ಕ್ಯಾಂಟೀನ್ನಿಂದ ಪಡೆದು ವಿತರಿಸಿತ್ತು. ಅದರ ಮೊತ್ತ ಇನ್ನೂ ಕೂಡ ಪಾವತಿಯಾಗಿಲ್ಲ. ಅಲ್ಲದೆ ಇಂದಿರಾ ಕ್ಯಾಂಟೀನ್ಗಳಿಗೆ ತಿಂಗಳಿಗೆ ನೀಡಬೇಕಾದ ಬಿಲ್ ಮೊತ್ತ ಕೂಡ ಹಲವು ತಿಂಗಳುಗಳಿಂದ ಬಾಕಿ ಇದೆ. ಹಾಗಾಗಿ ನಮಗೆ ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ಕ್ಯಾಂಟೀನ್ಗಳ ಗುತ್ತಿಗೆ ವಹಿಸಿಕೊಂಡಿರುವ ಸಂಸ್ಥೆಯ ಪ್ರಮುಖರು ಹೇಳಿಕೊಂಡಿದ್ದಾರೆ.
ಕಾರ್ಮಿಕರ ಸುರಕ್ಷತೆಯ ಆತಂಕ
ಅತ್ತ ಬಿಲ್ ಮೊತ್ತ ಬಾಕಿ ಇದ್ದರೆ, ಇತ್ತ ಕ್ಯಾಂಟೀನ್ನ ಕೆಲಸಗಾರರ ಸುರಕ್ಷತೆಯ ಆತಂಕವೂ ಗುತ್ತಿಗೆದಾರರಿಗೆ ಎದುರಾಗಿದೆ. ಸುಮಾರು 50 ಮಂದಿ ವಿವಿಧ ಊರುಗಳಿಂದ ಕ್ಯಾಂಟೀನ್ಗೆ ಬರಬೇಕಿದೆ. ಅವರನ್ನು ಕರೆದುಕೊಂಡು ಬಂದು ವಾಪಸ್ ಬಿಟ್ಟು ಬಿಡುವುದು ಕಷ್ಟದ ಕೆಲಸ. ನಮ್ಮೀ ಸಮಸ್ಯೆಯನ್ನು ಪಾಲಿಕೆ ಅಧಿಕಾರಿಗಳ ಗಮನ ಸೆಳೆದಿದ್ದೇವೆ ಎಂದು ತಿಳಿಸಿದ್ದಾರೆ.
ಗುರುವಾರದಿಂದ ಆರಂಭ
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್ಗಳಲ್ಲಿ ಸರಕಾದ ಆದೇಶದಂತೆ ಮೇ 13ರಿಂದ (ಗುರುವಾರ) ಬೆಳಗ್ಗೆ 6ರಿಂದ ರಾತ್ರಿ 9 ಗಂಟೆಯವರೆಗೆ ಉಚಿತವಾಗಿ ಊಟ/ಉಪಹಾರ ಸಿಗಲಿದೆ. ಈ ಬಗ್ಗೆ ಕ್ಯಾಂಟೀನ್ ನಿರ್ವಹಿಸುತ್ತಿರುವ ಸಂಸ್ಥೆಯ ಮ್ಯಾನೇಜರ್ ಜೊತೆಗೆ ಮಾತುಕತೆ ನಡೆಸಲಾಗಿದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಉಪ ಆಯುಕ್ತ ಡಾ.ಸಂತೋಷ್ ಕುಮಾರ್ ತಿಳಿಸಿದ್ದಾರೆ.







