ಇಂದಿರಾ ಕ್ಯಾಟೀನ್‍ಗಳಲ್ಲಿ ಹತ್ತು ರೂ. ಕೊಟ್ಟರೆ ಮಾತ್ರ ಊಟ: ಕಟ್ಟಡ ಕಾರ್ಮಿಕರ ಆರೋಪ

ಕಲಬುರಗಿ, ಮೇ 12: ಲಾಕ್‍ಡೌನ್ ಜಾರಿ ಅವಧಿಯಲ್ಲಿ ಕಾರ್ಮಿಕರಿಗೆ ಹಾಗೂ ನಿರ್ಗತಿಕರಿಗೆ ನೆರವಾಗಲಿ ಎಂಬ ಉದ್ದೇಶದಿಂದ ಹೈಕೋರ್ಟ್ ಆದೇಶದಂತೆ ರಾಜ್ಯ ಸರಕಾರ ಇಂದಿರಾ ಕ್ಯಾಟೀನ್‍ಗಳಲ್ಲಿ ಮೂರು ಹೊತ್ತು ಉಚಿತ ಉಪಾಹಾರ ಹಾಗೂ ಊಟ ನೀಡುವಂತೆ ಸೂಚಿಸಿದರೂ ಕಲಬುರಗಿಯ ಇಂದಿರಾ ಕ್ಯಾಟೀನ್‍ಗಳಲ್ಲಿ ಹತ್ತು ರೂ.ಕೊಟ್ಟರೆ ಮಾತ್ರ ಊಟ ಕೊಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ರಾಜ್ಯ ಸರಕಾರದ ಆದೇಶದಂತೆ ಮೇ 12ರಿಂದ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಉಚಿತ ಊಟ ನೀಡಲಾಗುತ್ತಿದೆ. ಆದರೆ, ಕಲಬುರಗಿಯ ಹಲವು ಕ್ಯಾಂಟೀನ್‍ಗಳಲ್ಲಿ ಹಣ ಪಡೆದು ಊಟ ಕೊಡುತ್ತಿದ್ದಾರೆ ಎಂದು ಬಡ ಕಟ್ಟಡ ಕಾರ್ಮಿಕರು ಆರೋಪಿಸಿದ್ದಾರೆ.
ಕಲಬುರಗಿ ಮಹಾನಗರ ಪಾಲಿಕೆ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್‍ನಲ್ಲಿ ಹಣ ಕೊಟ್ಟರೆ ಮಾತ್ರ ಊಟ ಸಿಗುತ್ತದೆ. ಹೈಕೋರ್ಟ್ ಆದೇಶಕ್ಕೂ ಕಲಬುರಗಿಯಲ್ಲಿ ಕವಡೆ ಕಾಸಿನ ಕಿಮ್ಮತ್ತು ಸಿಗುತ್ತಿಲ್ಲ. ಬಡವರಿಗೆ ಲಾಕ್‍ಡೌನ್ ಮುಗಿಯುವ ತನಕ ಉಚಿತವಾಗಿ ಊಟ ನೀಡಬೇಕು ಎಂಬ ಆದೇಶವಿದೆ. ಆದರೆ, ಇಲ್ಲಿನ ಕ್ಯಾಂಟೀನ್‍ಗಳಲ್ಲಿ ಬಡವರ ಬಳಿ ಹಣ ಪಡೆಯುತ್ತಿದ್ದಾರೆ. ಮೊದಲೇ ಲಾಕ್‍ಡೌನ್‍ನಿಂದಾಗಿ ಕೆಲಸ ಇಲ್ಲ. ನಮ್ಮ ಬಳಿ ಹಣ ಇಲ್ಲ. ಹೊಟ್ಟೆ ಹಸಿದರೆ ಎಲ್ಲಿಗೆ ಹೋಗುವುದು. ಕೋರ್ಟ್ ಆದೇಶದಿಂದ ಉಚಿತ ಆಹಾರ ಸಿಗುತ್ತದೆ ಎಂದು ಖುಷಿಯಾಯಿತು. ಆದರೆ, ಇಲ್ಲಿ ದುಡ್ಡು ಕೊಡಿ ಎನ್ನುತ್ತಿದ್ದಾರೆ ಎಂದು ಕಟ್ಟಡ ಕಾರ್ಮಿಕ ರವಿ ಎಂಬುವವರು ಆರೋಪಿಸಿದ್ದಾರೆ.







