ಉಡುಪಿಯಲ್ಲಿ ಗೊಂದಲ ಇಲ್ಲದೆ ಜೇಷ್ಠತೆ ಆಧಾರದಲ್ಲಿ ಲಸಿಕೆ ವಿತರಣೆ
45 ವರ್ಷ ಮೇಲ್ಪಟ್ಟವರಿಗೆ 100, 18ವರ್ಷ ಮೇಲ್ಪಟ್ಟವರಿಗೆ 150 ಡೋಸ್

ಉಡುಪಿ, ಮೇ 12: ಉಡುಪಿ ಜಿಲ್ಲಾಸ್ಪತ್ರೆಯ ಲಸಿಕಾ ಕೇಂದ್ರವಾಗಿರುವ ಸೈಂಟ್ ಸಿಸಿಲಿಸ್ ಶಾಲೆಯಲ್ಲಿ ಇಂದು ಯಾವುದೇ ನೂಕುನುಗ್ಗಲು ಇಲ್ಲದೆ ವ್ಯವಸ್ಥಿತವಾಗಿ ಲಸಿಕೆ ನೀಡುವ ಕಾರ್ಯ ನಡೆಯಿತು.
ಇಂದು ಮಾ.17ರ ಮೊದಲು ಕೋವಿಶೀಲ್ಡ್ ಮೊದಲ ಡೋಸ್ ಪಡೆದ 45ವರ್ಷ ಮೇಲ್ಪಟ್ಟವರಿಗೆ ಮಾತ್ರ ಎರಡನೇ ಡೋಸ್ ಪಡೆಯಲು ಆದ್ಯತೆ ನೀಡಲಾಯಿತು. ಈ ದಿನಾಂಕಕ್ಕಿಂತ ನಂತರ ಲಸಿಕೆ ತೆಗೆದುಕೊಂಡವರಿಗೆ ಕೇಂದ್ರಕ್ಕೆ ಪ್ರವೇಶಿಸುವ ಮೊದಲೇ ಮಾಹಿತಿ ನೀಡಲಾಯಿತು. ಆದುದರಿಂದ ಬಹುತೇಕ ಮಂದಿ ಕಾಯುವುದು ಬೇಡ ಎಂದು ಹೇಳಿ ಮನೆಗೆ ವಾಪಾಸ್ಸು ಹೋದರು.
ಇವತ್ತು ಈ ಕೇಂದ್ರಕ್ಕೆ ಒಟ್ಟು 100 ಕೋವಿಶೀಲ್ಡ್ ಲಸಿಕೆ ಬಂದಿದ್ದು, ಮಧ್ಯಾಹ್ನದೊಳಗೆ ಎಲ್ಲರಿಗೂ ಲಸಿಕೆ ನೀಡಲಾಯಿತು. ನೂಕುನುಗ್ಗಲು ಆಗದಂತೆ ಕೇಂದ್ರದಲ್ಲಿ ಸೇವೆಗಾಗಿ ರೆಡ್‌ಕ್ರಾಸ್ ಸೇವಕರನ್ನು ನಿಯೋಜಿಸಲಾಗಿತ್ತು. ಅಲ್ಲದೆ ಬಂದ ಎಲ್ಲರು ಕುಳಿತುಕೊಳ್ಳಲು ಅನುಕೂಲ ಆಗಲು 250 ಕುರ್ಚಿಗಳು ಹಾಗೂ ಶಾಮಿಯಾನ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಲಾಗಿದೆ.
18-44 ವರ್ಷ ವಯಸ್ಸಿನ 150 ಮಂದಿಗೆ ಆನ್‌ಲೈನ್ ಮೂಲಕ ರಿಜಿಸ್ಟಾರ್ ಮಾಡಿಕೊಂಡಿದ್ದು, ಅದರಲ್ಲಿ ಕೇಂದ್ರಕ್ಕೆ ಬಂದ 149 ಮಂದಿಗೆ ಲಸಿಕೆ ನೀಡ ಲಾಗಿದೆ. ಎರಡು ಕೌಂಟರ್‌ಗಳ ಪೈಕಿ ಒಂದರಲ್ಲಿ 45ವರ್ಷ ಮೇಲ್ಪಟ್ಟವರಿಗೆ ಮತ್ತು ಇನ್ನೊಂದು ಕೌಂಟರ್‌ನಲ್ಲಿ 18ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯ ನಡೆಯಿತು. 18ವರ್ಷ ಮೇಲ್ಪಟ್ಟ ಎಲ್ಲರಿಗೂ ಮಧ್ಯಾಹ್ನ 3.30ರೊಳಗೆ ಲಸಿಕೆ ನೀಡಲಾಯಿತು.
ಇಂದು ಎಲ್ಲವೂ ಅಚ್ಚುಕಟ್ಟಾಗಿ ಲಸಿಕೆ ನೀಡುವ ಕಾರ್ಯ ನಡೆಯಿತು. ಎಲ್ಲೂ ಗೊಂದಲ, ನೂಕುನುಗ್ಗಲು ಇರಲಿಲ್ಲ. ಮಾ.17ರ ಮೊದಲು ಲಸಿಕೆ ಪಡೆದ ವರಿಗೆ ಮಾತ್ರ ಟೋಕನ್ ನೀಡಲಾಯಿತು. ನಾಳೆ ಮಾ.19ರ ಮೊದಲು ಮೊದಲ ಡೋಸ್ ತೆಗೆದುಕೊಂಡ 100 ಮಂದಿಗೆ ಮಾತ್ರ ಕೋವಿಶೀಲ್ಡ್ ಲಸಿಕೆ ನೀಡಲಾಗುವುದು ಎಂದು ಈಗಾಗಲೇ ಮಾಹಿತಿ ನೀಡಲಾಗಿದೆ ಎಂದು ವೈದ್ಯ ಡಾ.ಸುಜಿತ್ ಮಾಹಿತಿ ನೀಡಿದರು.
ಕೌಂಟರ್‌ಗಳನ್ನು ಹೆಚ್ಚಿಸಲು ಆಗ್ರಹ
ಲಸಿಕೆ ಪಡೆಯುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಉಡುಪಿಯ ಲಸಿಕಾ ಕೇಂದ್ರದಲ್ಲಿ ಕೇವಲ ಎರಡನೇ ಕೌಂಟರ್‌ಗಳಿರುವುದರಿಂದ ಲಸಿಕೆ ನೀಡುವ ಕಾರ್ಯ ವಿಳಂಬವಾಗಿ ನಡೆಯುತ್ತಿದೆ ಎಂಬುದು ಸಾರ್ವಜನಿಕರ ಆರೋಪ.
ಎರಡು ಕೌಂಟರ್‌ಗಳಲ್ಲಿ ತಲಾ ಇಬ್ಬರು ನರ್ಸ್‌ಗಳಿದ್ದು, ಅದರಲ್ಲಿ ಒಬ್ಬರು ಮಾತ್ರ ಲಸಿಕೆ ನೀಡುವ ಕಾರ್ಯ ಮಾಡುತ್ತಾರೆ. ಆದುದರಿಂದ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಲಸಿಕೆ ನೀಡವ ಕಾರ್ಯ ಆಗುತ್ತಿದೆ. ಆದುದರಿಂದ ಕೌಂಟರ್ ಗಳನ್ನು ಹೆಚ್ಚಿಸುವ ಕಾರ್ಯ ಆಗಬೇಕು ಎಂಬುದು ಜನರ ಆಗ್ರಹ.
ಬೆಳಗ್ಗೆ 6ಗಂಟೆಗೆ ನಾನು ಮತ್ತು ನನ್ನ ಪತಿ ಲಸಿಕೆ ಪಡೆಯಲು ಕೇಂದ್ರಕ್ಕೆ ಬಂದಿದ್ದೇವೆ. 8ಗಂಟೆಗೆ ಟೋಕನ್ ಕೊಡುವ ಕಾರ್ಯ ಆರಂಭಗೊಂಡಿತು. ನಮಗೆ 16ನೆ ಸಂಖ್ಯೆಯ ಟೋಕನ್ ದೊರೆಯಿತು. ಆದರೆ ಲಸಿಕೆ ಪಡೆಯು ವಾಗ 10ಗಂಟೆ ಮೀರಿತು. ಇದರಿಂದ ಮನೆಯಲ್ಲಿ ಯಾವುದೇ ಅಡುಗೆ ಮಾಡಿ ಉಪಹಾರ ಸೇವಿಸದ ಸ್ಥಿತಿ ನಮ್ಮದಾಗಿದೆ. ಆದುದರಿಂದ ಕೌಂಟರ್ ಜಾಸ್ತಿ ಮಾಡಿ ವೇಗವಾಗಿ ಲಸಿಕೆ ನೀಡುವ ಕಾರ್ಯ ಆಗಬೇಕು ಎಂದು ನಿವೃತ್ತ ಪ್ರಾಂಶುಪಾಲೆ ಡಾ.ಮಾಧವಿ ಭಂಡಾರಿ ಒತ್ತಾಯಿಸಿದ್ದಾರೆ.
ಲಸಿಕೆ ಪಡೆಯುವವರಿಗೆ ಎಸ್‌ಎಂಎಸ್
ಉಡುಪಿ ನಗರದ ಲಸಿಕಾ ಕೇಂದ್ರಗಳಿಗೆ ಜನರು ಬಂದು ಟೋಕನ್ ಪಡೆದು ಲಸಿಕೆಯನ್ನು ಪಡೆಯುತ್ತಿದ್ದು, ಈ ಅನಾನುಕೂಲತೆಯನ್ನು ತಪ್ಪಿಸಲು ಮೊದಲ ಡೋಸ್ ಪಡೆದ ದಿನಾಂಕದ ಜೇಷ್ಠತೆ ಆಧಾರದಲ್ಲಿ ಬರುವ ಅರ್ಹ ವ್ಯಕ್ತಿಗಳಿಗೆ ಉಡುಪಿ ಜಿಲ್ಲಾಡಳಿತದಿಂದ ಮುಂಚಿನ ದಿನವೇ ಎಸ್‌ಎಂಎಸ್ ಕಳುಹಿಸಿ ಲಸಿಕೆ ಪಡೆಯಲು ತಿಳಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದ್ದಾರೆ.
ನಗರದ ಸೈಂಟ್ ಸಿಸಿಲೀಸ್ ಶಾಲೆಯ ಕೇಂದ್ರದಲ್ಲಿ 100 ಡೋಸ್ ಮತ್ತು ಮಣಿಪಾಲದ ನಗರ ಆರೋಗ್ಯ ಕೇಂದ್ರದಲ್ಲಿನ ಲಸಿಕಾ ಕೇಂದ್ರದಲ್ಲಿ 70 ಡೋಸ್ ಲಸಿಕೆಯನ್ನು ಮಾ.13ರಂದು ಬೆಳಗ್ಗೆ 10ಗಂಟೆಯಿಂದ ಸಂಜೆ 4ಗಂಟೆಯವರೆಗೆ ನೀಡಲಾಗುವುದು. ಎರಡನೇ ಡೋಸ್ ಲಸಿಕೆ ಪಡೆಯಲು ಎಸ್‌ಎಂಎಸ್ ಪಡೆದವರು ದಾಖಲೆಯೊಂದಿಗೆ ಕೇಂದ್ರಕ್ಕೆ ಬಂದು ಲಸಿಕೆ ಪಡೆಯಬೇಕು. ಮುಂದೆ ಲಸಿಕೆಯ ಲಭ್ಯತೆಯಂತೆ ಇದೇ ರೀತಿ ಜೇಷ್ಠತೆ ಆಧಾರದಲ್ಲಿ ಎಸ್‌ಎಂಎಸ್ ಕಳುಹಿಸಿ ಲಸಿಕೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.








