ಉಡುಪಿ: ಬುಧವಾರ ಕೋವಿಡ್ಗೆ 6 ಮಂದಿ ಬಲಿ, 919 ಮಂದಿಗೆ ಸೋಂಕು ದೃಢ

ಸಾಂದರ್ಭಿಕ ಚಿತ್ರ
ಉಡುಪಿ, ಮೇ 12: ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿಗೆ ಬಲಿಯಾದವರ ಸಂಖ್ಯೆ ಬುಧವಾರ ಮತ್ತೆ ಆರಕ್ಕೇರಿದೆ. ಇದರಿಂದ ಜಿಲ್ಲೆಯಲ್ಲಿ ಕೊರೋನಕ್ಕೆ ಬಲಿಯಾದವರ ಒಟ್ಟು ಸಂಖ್ಯೆ 245ಕ್ಕೇರಿದೆ. ದಿನದಲ್ಲಿ 919 ಮಂದಿ ಸೋಂಕಿಗೆ ಪಾಸಿಟಿವ್ ಬಂದಿದ್ದಾರೆ. ಅಲ್ಲದೇ ಜಿಲ್ಲೆಯಲ್ಲಿಂದು 837 ಮಂದಿ ಚಿಕಿತ್ಸೆಯ ಬಳಿಕ ಗುಣಮುಖರಾಗಿದ್ದು, ಸದ್ಯ ಜಿಲ್ಲೆಯಲ್ಲಿ 6952 ಮಂದಿ ಸೋಂಕಿಗೆ ಸಕ್ರಿಯರಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.
ಬುಧವಾರ ವರದಿಯಾದ ಆರು ಮಂದಿ ಮೃತರಲ್ಲಿ ಐವರು ಪುರುಷರು (58, 68, 77, 80,75) ಹಾಗೂ 88 ವರ್ಷ ಪ್ರಾಯದ ಓರ್ವ ಮಹಿಳೆ ಇದ್ದಾರೆ. ಇವರಲ್ಲಿ ಮೂವರು ಕುಂದಾಪುರ ಹಾಗೂ ಮೂವರು ಕುಂದಾಪುರ ತಾಲೂಕಿನವರು. ಕುಂದಾಪುರ ಖಾಸಗಿ ಆಸ್ಪತ್ರೆಗಳಲ್ಲಿ ಮೂವರು, ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಇಬ್ಬರು ಹಾಗೂ ಒಬ್ಬರು ಜಿಲ್ಲಾಸ್ಪತ್ರೆಯಲ್ಲಿ ಮೃತರಾದರು.
ಇಂದು ವರದಿಯಾದ ಆರು ಮಂದಿಯೂ ಪಡುವರಿ, ವಡೇರಹೋಬಳಿ, ಕಿರಿಮಂಜೇಶ್ವರ, ಪಾಂಗಾಳ, ಸಾಲಿಗ್ರಾಮದಂಥ ಗ್ರಾಮೀಣ ಪ್ರದೇಶಗಳಿಂದ ಬಂದವರು. ಎಲ್ಲರಲ್ಲೂ ಕೋವಿಡ್ನ ಗುಣಲಕ್ಷಣಗಳೊಂದಿಗೆ ತೀವ್ರ ಉಸಿರಾಟ ತೊಂದರೆ ಹಾಗೂ ನ್ಯುಮೋನಿಯಾ ಕಾಣಿಸಿಕೊಂಡಿತ್ತು.
ಬುಧವಾರ ಪಾಸಿಟಿವ್ ಬಂದ 919 ಮಂದಿಯಲ್ಲಿ 466 ಮಂದಿ ಪುರುಷರು ಹಾಗೂ 453 ಮಂದಿ ಮಹಿಳೆಯರು. ಇವರಲ್ಲಿ ಉಡುಪಿ ತಾಲೂಕಿನ 576, ಕುಂದಾಪುರ ತಾಲೂಕಿನ 257 ಹಾಗೂ ಕಾರ್ಕಳ ತಾಲೂಕಿನ 83 ಮಂದಿ ಇದ್ದು, ಉಳಿದ ಮೂವರು ಹೊರಜಿಲ್ಲೆಗಳಿಂದ ಉಡುಪಿ ಜಿಲ್ಲೆಗೆ ಆಗಮಿಸಿದವರು.
ಮಂಗಳವಾರ 837 ಮಂದಿ ಸೋಂಕಿನಿಂದ ಗುಣಮುಖರಾಗುವ ಮೂಲಕ ಜಿಲ್ಲೆಯಲ್ಲಿ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 35,539 ಕ್ಕೇರಿದೆ. ನಿನ್ನೆ ಜಿಲ್ಲೆಯ 2957 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿ ದ್ದಾರೆ. ಇಂದಿನ 919 ಮಂದಿ ಸೇರಿ ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 42,736 ಆಗಿದೆ ಎಂದು ಡಾ.ಸೂಡ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 5,37,062 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.
18-44ರ ಹರೆಯದ 582 ಮಂದಿಗೆ ಲಸಿಕೆ
ಜಿಲ್ಲೆಯ ನಾಲ್ಕು ಲಸಿಕಾ ಕೇಂದ್ರಗಳಲ್ಲಿ 18ರಿಂದ 44 ವರ್ಷ ಪ್ರಾಯದೊಳಗಿನವರಿಗೆ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಬುಧವಾರ 582 ಮಂದಿಗೆ ಕೋವಿಡ್ ಲಸಿಕೆ ಕೋವಿಶೀಲ್ಡ್ ನೀಡಲಾಯಿತು. ಈ ಮೂಲಕ ಮೂರು ದಿನಗಳಲ್ಲಿ ಒಟ್ಟು 1455 ಮಂದಿಗೆ ಲಸಿಕೆಯನ್ನು ನೀಡಿದಂತಾಗಿದೆ ಎಂದು ಎಂದು ಡಿಎಚ್ಓ ಡಾ.ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.
45 ವರ್ಷ ಮೇಲಿನವರಲ್ಲಿ ಇಂದು 27 ಮಂದಿ ಮೊದಲ ಡೋಸ್ನ್ನು ಪಡೆದರೆ, 285 ಮಂದಿ ಎರಡನೇ ಡೋಸ್ನ್ನು ಪಡೆದುಕೊಂಡಿದ್ದಾರೆ. 30 ಮಂದಿ ಆರೋಗ್ಯ ಕಾರ್ಯಕರ್ತರು ಹಾಗೂ 136 ಮಂದಿ ಕೊರೋನ ಮುಂಚೂಣಿ ಕಾರ್ಯಕರ್ತರು ಸಹ ಇಂದು ಲಸಿಕೆಯನ್ನು ಪಡೆದಿದ್ದಾರೆ.
ಒಟ್ಟಾರೆಯಾಗಿ ಜಿಲ್ಲೆಯಲ್ಲಿಂದು 752 ಮಂದಿ ಮೊದಲ ಡೋಸ್ನ್ನು, 308 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 1,96,471 ಮಂದಿ ಲಸಿಕೆಯ ಮೊದಲ ಡೋಸ್ನ್ನು ಪಡೆದಿದ್ದರೆ, 60,765 ಮಂದಿ ಎರಡನೇ ಡೋಸ್ನ್ನು ಸ್ವೀಕರಿಸಿದ್ದಾರೆ ಎಂದು ಡಾ.ಸೂಡ ತಿಳಿಸಿದರು.







