ಲಸಿಕೆ ವಿತರಣೆ ರಾಷ್ಟ್ರೀಯ ಆಂದೋಲನವಾಗಲಿ: ಕಾಂಗ್ರೆಸ್
ಉಡುಪಿ, ಮೇ 12: ಕೋವಿಡ್ ಲಸಿಕೆ ನೀಡುವುದನ್ನು ಕೇಂದ್ರ ಸರಕಾರ ಒಂದು ರಾಷ್ಟ್ರೀಯ ಆಂದೋಲನವನ್ನಾಗಿ ರೂಪಿಸಿ ದೇಶದ ಜನರಿಗೆ ಉಚಿತ ಮತ್ತು ಕಡ್ಡಾಯಗೊಳಿಸಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಸರಕಾರನ್ನು ಒತ್ತಾಯಿಸಿದೆ.
ಇದು ಇಂದಿನ ಅನಿವಾರ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಈ ಹಿಂದೆ ದೇಶದಲ್ಲಿ ಕಂಡು ಬಂದ ಸಿಡುಬು, ಮಲೇರಿಯಾ, ಕಾಲರಾ, ದಢಾರದಂತಹ ಮಹಾಮಾರಿ ರೋಗಗಳನ್ನು ನಿಯಂತ್ರಿಸುವಲ್ಲಿ ಅಂದಿನ ಸರಕಾರಗಳು ತೆಗೆದುಕೊಂಡ ನಿರ್ಣಯಗಳನ್ನು ಆದರ್ಶವಾಗಿರಿಸಿಕೊಂಡು ಕಾರ್ಯ ನಿರ್ವಹಿಸಬೇಕು ಎಂದು ಅದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಕೊರೋನ ನಿರ್ವಹಣೆ ಮತ್ತು ಲಸಿಕೆ ವಿತರಣೆಯಲ್ಲಿ ಸರಕಾರ ಎಡವಿದ್ದು ತನ್ನ ರಾಜಕೀಯದ ಅಸ್ತಿತ್ವಕ್ಕಾಗಿ ಸುಳ್ಳು ಹೇಳಿಕೆಗಳ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿದೆ. ಈಗಾಗಲೇ 2ನೇ ಲಸಿಕೆಗಾಗಿಯೇ ಜನರು ಪರದಾಡುತ್ತಿದ್ದಾರೆ. ಆದರೂ ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವುದಾಗಿ ಹೇಳಿರುವುದು ವಿಪರ್ಯಾಸ. ಇದೊಂದು ವ್ಯವಸ್ಥಿತ ನಾಟಕವಾಗಿದ್ದು, ಕೇಂದ್ರ ಸರಕಾರ ತನ್ನ ಆರ್ಥಿಕ ಲೆಕ್ಕಾಚಾರದಿಂದ ಹೊರ ಬಂದು ಸೂಕ್ತ ಕ್ರಮ ಕೈಗೊಳ್ಳ ಬೇಕು ಎಂದು ಜಿಲ್ಲಾ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ ಹೇಳಿದ್ದಾರೆ.







