ಈದುಲ್ ಫಿತ್ರ್ ಹಬ್ಬವನ್ನು ಮನೆಯಲ್ಲಿಯೇ ಆಚರಿಸಿ: ಹಾಜಿ ಶಬೀ ಅಹ್ಮದ್ ಖಾಝಿ

ಹಾಜಿ ಶಬೀ ಅಹ್ಮದ್ ಖಾಝಿ
ಮಂಗಳೂರು: ಪವಿತ್ರ ಈದುಲ್ ಫಿತ್ರ್ ದಿನದಂದು ನಾಡಿನ ಎಲ್ಲಾ ಮುಸ್ಲಿಮರು ಜಾತಿ ಮತ ಭೇದವಿಲ್ಲದೆ ಎಲ್ಲರಿಗೂ ಪರಸ್ಪರ ಸಹಾಯವನ್ನು ಮಾಡುತ್ತಾ ತಮ್ಮ ಮನೆ ಮಂದಿಯೊಂದಿಗೆ ತಮ್ಮ ಮನೆಯಲ್ಲಿಯೇ ಹಬ್ಬವನ್ನು ಆಚರಿಸಬೇಕು. ಅಲ್ಲದೇ ಈ ಕೊರೋನ ಮಹಾಮಾರಿಯನ್ನು ಎದುರಿಸುವ ನಿಟ್ಟಿನಲ್ಲಿ ಹೋರಾಡಬೇಕಾಗಿದೆ. ಕೋವಿಡ್ ಮಹಾಮಾರಿ ಇಡೀ ಜಗತ್ತಿನಿಂದಲೇ ಕಣ್ಮರೆಯಾಗಲೆಂದು ನಾವೆಲ್ಲರೂ ದೇವರೊಡನೆ ಪ್ರಾರ್ಥಿಸಬೇಕೆಂದು ದ. ಕ. ಹಾಗೂ ಉಡುಪಿ ಜಿಲ್ಲಾ ಜಮೀಯ್ಯತುಲ್ ಫಲಾಹ್ ಸಂಸ್ಥೆಯ ಅಧ್ಯಕ್ಷ ಹಾಜಿ ಶಬೀ ಅಹ್ಮದ್ ಖಾಝಿ ವಿನಂತಿಸಿದ್ದಾರೆ.
ಜಮೀಯ್ಯತುಲ್ ಫಲಾಹ್ ಸಂಸ್ಥೆಯು ಕೋವಿಡ್ ವಿರುದ್ಧ ಹೋರಾಟದಲ್ಲಿ ಪಾಲ್ಗೊಂಡಿದ್ದು, ಕಳೆದ ತಿಂಗಳು ಸಂಸ್ಥೆಯ ವತಿಯಿಂದ ಕೋವಿಡ್ ಲಸಿಕೆ ನೀಡುವ ಬಗ್ಗೆ ಮಾಹಿತಿ ಕಾರ್ಯಗಾರವನ್ನು ಹಾಗೂ ಸಂಸ್ಥೆಯ ಸಭಾಂಗಣದಲ್ಲಿ ವೆಲ್ ನೆಸ್ ಗ್ರೂಪ್ ಸಹಯೋಗದಲ್ಲಿ ಲಸಿಕೆ ನೀಡುವ ಕಾರ್ಯಕ್ರಮವನ್ನೂ ಹಮ್ಮಿಕೊಂಡಿತ್ತು. ಸಂಸ್ಥೆಯು ಈ ರಮಝಾನ್ ತಿಂಗಳ ಪ್ರಾರಂಭದಲ್ಲಿ ದಾನಿಗಳ ಸಹಾಯದಿಂದ ಆಹಾರ ವಸ್ತುಗಳ ಕಿಟ್ ಗಳನ್ನು ಎರಡೂ ಜಿಲ್ಲೆಗಳ 13 ತಾಲೂಕು ಘಟಕಗಳ ಮೂಲಕ ಅರ್ಹ ಬಡವರಿಗೆ ವಿತರಿಸಿದ್ದೆವೆಂದು ತಿಳಿಸಿದ್ದಾರೆ.







