ಕೋವಿಡ್ ಬಿಕ್ಕಟ್ಟು ನಿರ್ವಹಿಸುವಲ್ಲಿ ಕೇಂದ್ರ ಸರಕಾರ 'ಜಾರಿ ಬಿದ್ದಿದೆ': ಅನುಪಮ್ ಖೇರ್

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಆಗಾಗ್ಗೆ ಹೊಗಳುತ್ತಿರುವ ,ಬಿಜೆಪಿ ನೇತೃತ್ವದ ಆಡಳಿತದ ಪ್ರಬಲ ರಕ್ಷಕರೆಂದು ಬಿಂಬಿತರಾಗಿರುವ ನಟ ಅನುಪಮ್ ಖೇರ್, ಕೋವಿಡ್ ಬಿಕ್ಕಟ್ಟು ನಿರ್ವಹಿಸುವಲ್ಲಿ ಸರ್ಕಾರ "ಜಾರಿಬಿದ್ದಿದೆ" ಎಂಬುದು ನನ್ನ ನಂಬಿಕೆ. ಸರಕಾರವು ಅದರ ಜವಾಬ್ದಾರಿ ತೆಗೆದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ ಎಂದರು.
"ಎಲ್ಲೋ ಅವರು ಜಾರಿಬಿದ್ದಿದ್ದಾರೆ ... ಇಮೇಜ್ ಅನ್ನು ಬಿಲ್ಡಪ್ ಮಾಡುವುದಕ್ಕಿಂತಲೂ ಜೀವನವೇ ಮುಖ್ಯ ಎಂದು ಅವರು ಅರ್ಥಮಾಡಿಕೊಳ್ಳುವ ಸಮಯ ಬಂದಿದೆ" ಎಂದು ಅನುಪಮ್ ಖೇರ್ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಕೇಂದ್ರ ಸರಕಾರವು ತನ್ನ ಇಮೇಜ್ ಹಾಗೂ ಗ್ರಹಿಕೆಗಳನ್ನು ನಿರ್ವಹಿಸುವುದಕ್ಕಿಂತ ಪರಿಹಾರವನ್ನು ನೀಡುವ ಬಗ್ಗೆ ಪ್ರಯತ್ನಗಳು ಹೆಚ್ಚು ಇರಬೇಕೇ, ಕೋವಿಡ್ ಪೀಡಿತ ಕುಟುಂಬಗಳು ಆಸ್ಪತ್ರೆಯ ಹಾಸಿಗೆಗಳಿಗಾಗಿ ಭಿಕ್ಷೆ ಬೇಡುವುದು, ಶವಗಳು ನದಿಯಲ್ಲಿ ತೇಲುತ್ತಿರುವುದು ಹಾಗೂ ರೋಗಿಗಳು ಹೆಣಗಾಡುತ್ತಿರುವ ಚಿತ್ರಗಳಿಂದ ತಾವು ಎಷ್ಟು ದುಃಖಿತರಾಗಿದ್ದೀರಿ ಎಂದು ಖೇರ್ ಅವರಲ್ಲಿ ಕೇಳಲಾಗಿತ್ತು.
"ಈ ಟೀಕೆ ಸಾಕಷ್ಟು ಪ್ರಕರಣಗಳಲ್ಲಿ ಮಾನ್ಯವಾಗಿದೆ ಎಂದು ನಾನು ಭಾವಿಸುತ್ತೇನೆ ಹಾಗೂ ಈ ಸಂದರ್ಭಕ್ಕೆ ಸರಕಾರವು ಸ್ಪಂದಿಸಬೇಕು ಹಾಗೂ ಸರಕಾರ ಈ ದೇಶದ ಜನರಿಂದ ಆರಿಸಲ್ಪಟ್ಟಿರುವ ಕಾರಣ ಕೆಲಸಗಳನ್ನು ಮಾಡುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ. ಶವಗಳು ನದಿಯಲ್ಲಿ ತೇಲುತ್ತಿರುವ ದೃಶ್ಯದಿಂದ ಅಮಾನವೀಯ ವ್ಯಕ್ತಿಗೆ ಮಾತ್ರ ಏನೂ ಎನಿಸದು. ಆದರೆ ಮತ್ತೊಂದು ರಾಜಕೀಯ ಪಕ್ಷವು ಅದನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವುದು ಕೂಡ ಸರಿಯಲ್ಲ"ಎಂದು ಹಿರಿಯ ನಟ ಹೇಳಿದರು.