ಬೆಡ್ ಬ್ಲಾಕಿಂಗ್ ಹಗರಣ: ಮೇಲ್ವಿಚಾರಣೆಗೆ ಹಿರಿಯ ಐಪಿಎಸ್ ಅಧಿಕಾರಿಯನ್ನು ನೇಮಿಸಲು ಹೈಕೋರ್ಟ್ ನಿರ್ದೇಶ
ಬೆಂಗಳೂರು, ಮೇ 12: ಬಿಬಿಎಂಪಿಯಲ್ಲಿ ನಡೆದಿರುವ ಆಸ್ಪತ್ರೆಗಳ ಬೆಡ್ ಬ್ಲಾಕಿಂಗ್ ಹಗರಣದ ಕುರಿತು ಸಿಸಿಬಿ ಸಲ್ಲಿಸಿರುವ ತನಿಖಾ ವರದಿ ಪರಿಶೀಲಿಸಿದ ಹೈಕೋರ್ಟ್, ಪ್ರಕರಣ ಬಹಳ ಸೂಕ್ಷ್ಮ ಹಾಗೂ ಗಂಭೀರವಾಗಿದೆ. ಹೀಗಾಗಿ, ಪ್ರಕರಣದ ತನಿಖೆಯ ಮೇಲ್ವಿಚಾರಣೆ ನಡೆಸಲು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರನ್ನು ನಿಯೋಜಿಸಬೇಕು ಮತ್ತು ಸೈಬರ್ ತಜ್ಞರು ಸೇರಿ ಅಗತ್ಯ ತಜ್ಞರ ನೆರವು ಪಡೆದುಕೊಳ್ಳುವಂತೆ ಸರಕಾರಕ್ಕೆ ನಿರ್ದೇಶಿಸಿದೆ.
ಕೋವಿಡ್ ನಿರ್ವಹಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ, ಹೆಚ್ಚುವರಿ ಅಡ್ವಕೇಟ್ ಜನರಲ್ ಆರ್.ಸುಬ್ರಮಣ್ಯ ಅವರು, ಸಿಸಿಬಿಯ ಪ್ರಾಥಮಿಕ ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಪೀಠಕ್ಕೆ ಸಲ್ಲಿಸಿದರು. ಹಾಗೆಯೇ, ವಿವರಣೆ ನೀಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ, ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ವರದಿ ಪರಿಶೀಲಿಸಿದ ಪೀಠ, ಸಿಸಿಬಿ ಇನ್‍ಸ್ಪೆಕ್ಟರ್ ಮಾತ್ರ ತನಿಖೆ ನಡೆಸುತ್ತಿದ್ದಾರೆ. ಅದು ಸಾಕಾಗುವುದಿಲ್ಲ. ಅನುಭವಿ ಐಪಿಎಸ್ ಆಧಿಕಾರಿ ತನಿಖೆಯ ಉಸ್ತುವಾರಿ ವಹಿಸಬೇಕು. ಸೈಬರ್ ತಜ್ಞರು ಸೇರಿದಂತೆ ಪ್ರಕರಣಕ್ಕೆ ಅಗತ್ಯವಿರುವ ತಜ್ಞರ ಕೂಡ ತನಿಖಾ ತಂಡದಲ್ಲಿರಬೇಕು ಎಂದು ನಿರ್ದೇಶಿಸಿತು. ಅಲ್ಲದೆ, ಮುಂದಿನ ವಿಚಾರಣೆ ವೇಳೆ ತನಿಖೆಯ ವಿವರಗಳನ್ನು ಒಳಗೊಂಡ ವರದಿಯನ್ನು ಸಲ್ಲಿಸಬೇಕು ಎಂದು ಸರಕಾರಕ್ಕೆ ನಿರ್ದೇಶಿಸಿ, ವಿಚಾರಣೆ ಮುಂದೂಡಿತು.
ಇದಕ್ಕೂ ಮುನ್ನ ಸರಕಾರದ ಪರ ವಕೀಲರು ತನಿಖೆಯ ಮೇಲುಸ್ತುವಾರಿಯನ್ನು ನಗರ ಕ್ರೈಮ್ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.







