ಕೊರೋನ ಮುಗಿಯಿತೆಂದು ಅವಧಿಗೆ ಮುಂಚಿತವಾಗಿ ನಿರ್ಬಂಧಗಳನ್ನು ತೆರವುಗೊಳಿಸಿದ ಫಲ ಭಾರತ ಅನುಭವಿಸುತ್ತಿದೆ: ಅಮೆರಿಕ

ವಾಶಿಂಗ್ಟನ್: ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ಮುಕ್ತಾಯಗೊಂಡಿದೆ ಎಂಬ ತಪ್ಪು ನಿರ್ಧಾರವನ್ನು ತೆಗೆದುಕೊಂಡ ಭಾರತ, ಅವಧಿಗಿಂತ ಮುಂಚಿತವಾಗಿಯೇ ಎಲ್ಲ ನಿರ್ಬಂಧಗಳನ್ನು ತೆರವುಗೊಳಿಸಿತು. ಅದರ ಫಲವನ್ನು ಭಾರತ ಇಂದು ಅನುಭವಿಸುತ್ತಿದೆ ಎಂದು ಅಮೆರಿಕದ ಉನ್ನತ ಸಾಂಕ್ರಾಮಿಕ ರೋಗಗಳ ತಜ್ಞ ಡಾ. ಆ್ಯಂಟನಿ ಫೌಚಿ ಹೇಳಿದ್ದಾರೆ.
ಕೊರೋನ ವೈರಸ್ನ ಭೀಕರ ಎರಡನೇ ಅಲೆಯಲ್ಲಿ ಭಾರತ ನುಜ್ಜುಗುಜ್ಜಾಗಿದೆ. ಕೊರೋನ ರೋಗಿಗಳು ಆಸ್ಪತ್ರೆಗಳಲ್ಲಿ ಹಾಸಿಗೆ, ಆಮ್ಲಜನಕ, ಔಷಧ, ವೈದ್ಯಕೀಯ ಸಿಬ್ಬಂದಿ ಇಲ್ಲದೆ ಉಸಿರುಗಟ್ಟಿ ಸಾಯುತ್ತಿದ್ದಾರೆ.
ಭಾರತದಲ್ಲಿ ಮೊದಲ ಕೊರೋನ ವೈರಸ್ ಅಲೆ ಕಾಣಿಸಿಕೊಂಡಿತು. ಅದರ ತೀವ್ರತೆ ಕಡಿಮೆಯಾದ ಬಳಿಕ, ಸಾಂಕ್ರಾಮಿಕ ಹೋಗಿದೆ ಎಂಬ ತಪ್ಪು ನಿರ್ಧಾರಕ್ಕೆ ಅವರು ಬಂದರು. ಹಾಗಾಗಿ, ಎಲ್ಲ ಕೊರೋನ ವೈರಸ್ ನಿರ್ಬಂಧಗಳನ್ನು ಅವರು ತೆರವುಗೊಳಿಸಿದರು. ಈಗ ಕೊರೋನ ವೈರಸ್ ಎರಡನೇ ಅಲೆಯು ಅವರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಅದರ ವಿನಾಶಕಾರಿ ಸ್ವರೂಪವನ್ನು ಈಗ ನಾವೆಲ್ಲರೂ ನೋಡುತ್ತಿದ್ದೇವೆ ಎಂದು ಅವರು ಹೇಳಿದರು.
ಕೋವಿಡ್-19 ಸಾಂಕ್ರಾಮಿಕ ನಿಭಾವಣೆ ಬಗ್ಗೆ ಅಮೆರಿಕ ಸೆನೆಟ್ನ ಆರೋಗ್ಯ, ಶಿಕ್ಷಣ, ಕಾರ್ಮಿಕ ಮತ್ತು ಪಿಂಚಣಿ ಸಮಿತಿ ಏರ್ಪಡಿಸಿದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಅಮೆರಿಕದ ರಾಷ್ಟ್ರೀಯ ಅಲರ್ಜಿ ಮತ್ತು ಸಾಂಕ್ರಾಮಿಕ ಕಾಯಿಲೆಗಳ ಸಂಸ್ಥೆಯ ನಿರ್ದೇಶಕರಾಗಿರುವ ಡಾ. ಫೌಚಿ, ಅಧ್ಯಕ್ಷ ಜೋ ಬೈಡನ್ ನ ಮುಖ್ಯ ವೈದ್ಯಕೀಯ ಸಲಹೆಗಾರರೂ ಆಗಿದ್ದಾರೆ.
ಈ ಸಾಂಕ್ರಾಮಿಕ ಮತ್ತು ಭವಿಷ್ಯದ ಯಾವುದೇ ರೋಗಗಳನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಲು ಅಮೆರಿಕದಲ್ಲಿ ಪ್ರಬಲ ಸಾರ್ವಜನಿಕ ಆರೋಗ್ಯ ಮೂಲಸೌಕರ್ಯವನ್ನು ಸ್ಥಾಪಿಸಬೇಕಾದ ಅಗತ್ಯವನ್ನು ಭಾರತದ ಪ್ರಸಕ್ತ ಪರಿಸ್ಥಿತಿಯು ಪ್ರತಿಪಾದಿಸುತ್ತದೆ ಎಂದು ಸೆನೆಟರ್ ಮರೆ ಹೇಳಿದರು.
ಯಾವುದೇ ಪರಿಸ್ಥಿತಿಯನ್ನು ಕಡೆಗಣಿಸಬಾರದು. ಮುಂದಾಲೋಚನೆಯಿಲ್ಲದೆ ಮೈಮರೆಯಬಾರದು ಎಂಬ ಪಾಠವನ್ನು ನಾವು ಭಾರತದಿಂದ ಕಲಿಯಬೇಕಾಗಿದೆ ಎಂದು ಫೌಚಿ ಅಭಿಪ್ರಾಯಪಟ್ಟರು.