ಕೋವಿಡ್: ಸತತ ಎರಡನೇ ದಿನವೂ 4 ಸಾವಿರಕ್ಕಿಂತ ಅಧಿಕ ಸಾವು

ಹೊಸದಿಲ್ಲಿ: ದೇಶದಲ್ಲಿ ಸತತ ಎರಡನೇ ದಿನವೂ ಕೋವಿಡ್-19 ಸೋಂಕಿನಿಂದ ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಅಸು ನೀಗಿದ್ದಾರೆ. ಬುಧವಾರ ದೇಶದಲ್ಲಿ ಮತ್ತೆ ಕೋವಿಡ್-19 ಹೊಸ ಪ್ರಕರಣಗಳ ಸಂಖ್ಯೆ 3.5 ಲಕ್ಷದ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 3,62,720 ಹೊಸ ಪ್ರಕರಣಗಳು ವರದಿಯಾಗಿದ್ದು, 4136 ಮಂದಿ ಮೃತಪಟ್ಟಿದ್ದಾರೆ.
ಮೇ 10ರಿಂದೀಚೆಗೆ ವಿಶ್ವದಲ್ಲಿ ವರದಿಯಾಗುತ್ತಿರುವ ಒಟ್ಟು ಕೋವಿಡ್-19 ಪ್ರಕರಣಗಳ ಪೈಕಿ ಶೇಕಡ 50ಕ್ಕಿಂತಲೂ ಅಧಿಕ ಪ್ರಕರಣಗಳು ಭಾರತದಲ್ಲಿ ಕಂಡುಬರುತ್ತಿವೆ. ಅಂದರೆ ಭಾರತ ಹೊರತುಪಡಿಸಿ ಇಡೀ ವಿಶ್ವದಲ್ಲಿ ವರದಿಯಾಗುತ್ತಿರುವ ಒಟ್ಟು ಪ್ರಕರಣಗಳ ಸಂಖ್ಯೆ, ಭಾರತದಲ್ಲಿ ವರದಿಯಾಗುತ್ತಿರುವ ಸಂಖ್ಯೆಗಿಂತ ಕಡಿಮೆ. ಕಳೆದ ಮೂರು ದಿನಗಳಲ್ಲಿ ಇಡೀ ವಿಶ್ವದಲ್ಲಿ ಮೃತಪಟ್ಟ ಒಟ್ಟು ಕೋವಿಡ್-19 ಸೋಂಕಿತರ ಪೈಕಿ ಮೂರನೇ ಒಂದರಷ್ಟು ಮಂದಿ ಭಾರತೀಯರು ಎಂದು ತಿಳಿದು ಬಂದಿದೆ.
ಪ್ರಸ್ತುತ ವಿಶ್ವದಲ್ಲಿ ಸಾಂಕ್ರಾಮಿಕದಿಂದ ತೀರಾ ಬಾಧಿತವಾಗಿರುವ ದೇಶಗಳಿಗಿಂತಲೂ ಅಧಿಕ ಪ್ರಕರಣಗಳು ಭಾರತದಲ್ಲಿ ವರದಿಯಾಗುತ್ತಿವೆ. ವಿಶ್ವದಲ್ಲೇ ಎರಡನೇ ಗರಿಷ್ಠ ಸಂಖ್ಯೆಯ ಪ್ರಕರಣಗಳು ಬ್ರೆಜಿಲ್‍ನಿಂದ ವರದಿಯಾಗಿದ್ದು, ಇಲ್ಲಿನ ಹೊಸ ಪ್ರಕರಣಗಳು 25,200. ಅಮೆರಿಕದಲ್ಲಿ 22216 ಹಾಗೂ ಫ್ರಾನ್ಸ್ ಮತ್ತು ಇರಾನ್‍ನಲ್ಲಿ ತಲಾ 18 ಸಾವಿರ ಪ್ರಕರಣಗಳು ವರದಿಯಾಗಿವೆ. ಹಲವು ರಾಜ್ಯಗಳಲ್ಲಿ ವಿಶ್ವದ ಇತರ ದೇಶಗಳಲ್ಲಿ ವರದಿಯಾಗಿದ್ದಕಿಂತ ಹೆಚ್ಚು ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ.
ಮಹಾರಾಷ್ಟ್ರ ಹಾಗೂ ಕೇರಳದಲ್ಲಿ 40 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದರೆ, ಕರ್ನಾಟಕದಲ್ಲಿ ಈ ಪ್ರಮಾಣ 40 ಸಾವಿರಕ್ಕಿಂತ ಸ್ವಲ್ಪ ಕಡಿಮೆ. ತಮಿಳುನಾಡಿನಲ್ಲಿ 30 ಸಾವಿರಕ್ಕೂ ಅಧಿಕ ಪ್ರಕರಣಗಳು ಸೇರ್ಪಡೆಯಾಗಿವೆ. ಆಂಧ್ರಪ್ರದೇಶ ಹಾಗೂ ಪಶ್ಚಿಮ ಬಂಗಾಳ 20 ಸಾವಿರ ಪ್ರಕರಣಗಳ ಗಡಿ ದಾಟಿದ್ದರೆ, ಉತ್ತರ ಪ್ರದೇಶ ಹಾಗೂ ರಾಜಸ್ಥಾನದಲ್ಲಿ 15 ರಿಂದ 18 ಸಾವಿರ ಪ್ರಕರಣಗಳು ವರದಿಯಾಗಿವೆ.







