ಮಹಾರಾಷ್ಟ್ರ ಉಪಮುಖ್ಯಮಂತ್ರಿಯ ಸಾಮಾಜಿಕ ಜಾಲತಾಣ ಖಾತೆ ನಿರ್ವಹಣೆಗೆ 6 ಕೋಟಿ ರೂ. ಮೀಸಲು !

ಮುಂಬೈ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಮತ್ತು ಎನ್‍ಸಿಪಿ ಮುಖಂಡ ಅಜಿತ್ ಪವಾರ್ ಅವರ ಸಾಮಾಜಿಕ ಜಾಲತಾಣ ಖಾತೆಗಳನ್ನು ನಿರ್ವಹಿಸಲು ಸರ್ಕಾರ ಆರು ಕೋಟಿ ರೂಪಾಯಿಗಳನ್ನು ತೆಗೆದಿರಿಸಿದೆ. ಪವಾರ್ ಅವರು ಹಣಕಾಸು ಹಾಗೂ ಯೋಜನಾ ಖಾತೆಯನ್ನೂ ನಿಭಾಯಿಸುತ್ತಿದ್ದಾರೆ.
ರಾಜ್ಯದ ಸಾಮಾನ್ಯ ಆಡಳಿತ ಇಲಾಖೆ ಈ ಸಂಬಂಧ ಬುಧವಾರ ಆದೇಶ ಹೊರಡಿಸಿದ್ದು, ಇದರ ಅನ್ವಯ ಸಾಮಾಜಿಕ ಜಾಲತಾಣ ಖಾತೆಗಳನ್ನು ನಿರ್ವಹಿಸುವ ಹೊಣೆಯನ್ನು ಬಾಹ್ಯ ಏಜೆನ್ಸಿಗೆ ನೀಡಲು ನಿರ್ಧರಿಸಲಾಗಿದೆ. ಅಜಿತ್ ಪವಾರ್ ಅವರು ಕೈಗೊಂಡ ನಿರ್ಧಾರಗಳು ಜನಸಾಮಾನ್ಯರಿಗೆ ತಲುಪುವಂತೆ ಮಾಡುವ ಹೊಣೆಯನ್ನು ಈ ಏಜೆನ್ಸಿಗೆ ವಹಿಸಲಾಗಿದೆ.
ಅಧೀನ ಕಾರ್ಯದರ್ಶಿ ಆರ್.ಎನ್.ಮುಸಳೆ ಈ ಆದೇಶಕ್ಕೆ ಸಹಿ ಮಾಡಿದ್ದು, ಅಜಿತ್ ಪವಾರ್ ಅವರ ಫೇಸ್‍ಬುಕ್, ಬ್ಲಾಗರ್, ಯೂಟ್ಯೂಬ್ ಹಾಗೂ ಇನ್‍ಸ್ಟಾಗ್ರಾಂ ಖಾತೆಗಳನ್ನು ನಿರ್ವಹಿಸಬೇಕಾಗುತ್ತದೆ. ಜತೆಗೆ ಸೌಂಡ್ ಕ್ಲೌಡ್, ವಾಟ್ಸಪ್ ಬುಲೆಟಿನ್, ಟೆಲಿಗ್ರಾಂ ಚಾನಲ್ ಮತ್ತು ಎಸ್‍ಎಂಎಸ್‍ಗಳನ್ನೂ ಈ ಏಜೆನ್ಸಿ ನಿರ್ವಹಿಸಲಿದೆ.
ಉಪಮುಖ್ಯಮಂತ್ರಿಯವರ ಕಚೇರಿ ಮತ್ತು ಮಾಹಿತಿ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯ ಮಹಾನಿರ್ದೇಶಕರ ಜತೆ ಚರ್ಚಿಸಿ ಬಾಹ್ಯ ಏಜೆನ್ಸಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಮಾಹಿತಿ ಮತ್ತು ಸಾರ್ವಜನಿಕ ಇಲಾಖೆಯಲ್ಲಿ ಸಾಮಾಜಿಕ ಜಾಲತಾಣಗಳನ್ನು ನಿರ್ವಹಿಸುವ ವೃತ್ತಿಪರ ಹಾಗೂ ತಾಂತ್ರಿಕ ಸಾಮರ್ಥ್ಯ ಇಲ್ಲದ ಕಾರಣ ಬಾಹ್ಯ ಏಜೆನ್ಸಿಯನ್ನು ನೇಮಕ ಮಾಡಿಕೊಳ್ಳುವುದು ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದು ವಿವರಿಸಲಾಗಿದೆ.
ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ 1200ಕ್ಕೂ ಹೆಚ್ಚು ಸಿಬ್ಬಂದಿ ಇದ್ದು, 150 ಕೋಟಿ ರೂಪಾಯಿ ವಾರ್ಷಿಕ ಬಜೆಟ್ ನಿಗದಿಪಡಿಸಲಾಗಿದೆ. ಆದಾಗ್ಯೂ ಬಾಹ್ಯ ಏಜೆನ್ಸಿಯನ್ನು ನೇಮಕ ಮಾಡಿಕೊಳ್ಳುವ ಅಗತ್ಯ ಏನಿತ್ತು ಎಂಬ ಪ್ರಶ್ನೆಯನ್ನು ಹಿರಿಯ ಅಧಿಕಾರಿಯೊಬ್ಬರು ಮುಂದಿಟ್ಟಿದ್ದಾರೆ.







