ಭಾರತದಲ್ಲಿ ಕೋವಿಡ್ ಹೆಚ್ಚಳಕ್ಕೆ ಧಾರ್ಮಿಕ, ರಾಜಕೀಯ ಸಭೆಗಳು ಕಾರಣ: ಡಬ್ಲ್ಯುಎಚ್‍ಓ

ವಿಶ್ವಸಂಸ್ಥೆ: ಭಾರತದಲ್ಲಿ ಕೋವಿಡ್-19 ಸೋಂಕಿನ ಎರಡನೇ ಅಲೆಯ ಅಬ್ಬರಕ್ಕೆ "ಹಲವು ಧಾರ್ಮಿಕ ಮತ್ತು ರಾಜಕೀಯ ಸಭೆ ಸಮಾರಂಭಗಳು ಗಣನೀಯ ಕೊಡುಗೆ ನೀಡಿವೆ" ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ.
ಭಾರತದ ಪರಿಸ್ಥಿತಿ ಮತ್ತು ಅಪಾಯ ಸಾಧ್ಯತೆ ಅಂದಾಜಿಸುವಿಕೆ ಅಧ್ಯಯನದಲ್ಲಿ ಈ ಅಂಶ ತಿಳಿದುಬಂದಿದ್ದು, ಹಲವು ಇತರ ಅಂಶಗಳ ಜತೆ ಸಾಮಾಜಿಕವಾಗಿ ಜನ ಹೆಚ್ಚಾಗಿ ಬೆರೆತಿರುವುದು ಸಾಂಕ್ರಾಮಿಕ ಹರಡಲು ಪ್ರಮುಖ ಕಾರಣ ಎಂದು ಸ್ಪಷ್ಟಪಡಿಸಿದೆ.
ಭಾರತದಲ್ಲಿ 2020ರ ಅಕ್ಟೋಬರ್‍ನಲ್ಲಿ ಮೊಟ್ಟಮೊದಲ ಬಾರಿಗೆ ಬಿ.1.167 ಪ್ರಬೇಧ ಪತ್ತೆಯಾಗಿತ್ತು ಎಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ಕೋವಿಡ್-19 ಸಾಪ್ತಾಹಿಕ ಮಾಹಿತಿಯಲ್ಲಿ ವಿವರಿಸಿದೆ.
"ಭಾರತದಲ್ಲಿ ಕೊರೋನಾ ವೈರಸ್ ಸೋಂಕು ವೇಗವಾಗಿ ಬೆಳೆಯಲು ಹಲವು ಅಂಶಗಳು ಗಣನೀಯ ಕೊಡುಗೆ ನೀಡಿವೆ. ವೇಗವಾಗಿ ಹರಡಬಲ್ಲ ಎಸ್‍ಎಆರ್ಎಸ್-ಕೋವ್-2 ಪ್ರಮಾಣ ಹೆಚ್ಚಳವಾಯಿತು; ರಾಜಕೀಯ ಹಾಗೂ ಧಾರ್ಮಿಕ ಸಭೆ ಸಮಾರಂಭಗಳಿಂದಾಗಿ ಜನ ಸಾಮಾಜಿಕವಾಗಿ ಬೆರೆಯುವುದು ಹೆಚ್ಚಿತು. ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ಕ್ರಮಗಳನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ. ಈ ಎಲ್ಲ ಅಂಶಗಳೂ ಸೋಂಕು ಹೆಚ್ಚಳಕ್ಕೆ ಕಾರಣವಾಗಿದ್ದರೂ, ನಿರ್ದಿಷ್ಟವಾಗಿ ಇಂಥದ್ದೇ ಕಾರಣ ಎನ್ನುವುದು ಅರ್ಥವಾಗಿಲ್ಲ ಎಂದು ವಿಶ್ಲೇಷಿಸಿದೆ.







