ಕರಾವಳಿಯಾದ್ಯಂತ ಸರಳವಾಗಿ ‘ಈದುಲ್ ಫಿತ್ರ್’ ಆಚರಣೆ

ಮಂಗಳೂರು, ಮೇ 12: ಕೊರೋನ-ಲಾಕ್‌ಡೌನ್, ಕರ್ಫ್ಯೂ ಹಿನ್ನೆಲೆ ಮತ್ತು ಸರಕಾರದ ಆದೇಶದ ಮೇರೆಗೆ ದ.ಕ., ಉಡುಪಿ, ಕಾಸರಗೋಡು ಜಿಲ್ಲೆಗಳ ಸಹಿತ ಕರಾವಳಿ ತೀರದ ಮುಸ್ಲಿಮರು ಇಂದು ಅತ್ಯಂತ ಸರಳವಾಗಿ ಈದುಲ್ ಫಿತ್ರ್ ಹಬ್ಬ ಆಚರಿಸಿದರು.
ಈ ಮುಂಚೆ ಪ್ರತೀ ಈದ್ ದಿನದಂದು ಮುಂಜಾನೆ ಎದ್ದು ಸ್ನಾನ ಮಾಡಿ, ಹೊಸ ಬಟ್ಟೆಬರೆ ಧರಿಸಿ, ಅತ್ತರ್ ಪೂಸಿ, ಸಿಹಿತಿಂಡಿ ತಿಂದು ತಕ್ಬೀರ್‌ನ ಧ್ವನಿ ಮೊಳಗಿಸುತ್ತಾ ಸಾಲಾಗಿ ಮಸೀದಿ ಅಥವಾ ಈದ್ಗಾಗಳಿಗೆ ತೆರಳಿ ‘ಈದ್ ನಮಾಝ್’ ಮಾಡುವುದು, ಈದ್ ಖುತ್ಬಾ ಆಲಿಸುವುದು, ಪರಸ್ಪರ ಆಲಿಂಗಿಸಿ ಯೋಗಕ್ಷೇಮ ವಿಚಾರಿಸುವುದು, ಮಾತು ಬಿಟ್ಟವರನ್ನು ಹುಡುಕಿಕೊಂಡು ಹೋಗಿ ಮಾತನಾಡಿಸುವುದು, ಖಬರಸ್ಥಾನ ಸಂದರ್ಶಿಸುವುದು, ಸಾಮೂಹಿಕ ಝಿಯಾರತ್ ಮಾಡುವುದು, ನೆರೆಮನೆ ಮತ್ತು ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿ ನೀಡುವುದು, ಸಿಹಿತಿಂಡಿ ಹಂಚುವುದು, ಈದ್ ಹಣ ವಿತರಿಸುವುದು, ಸ್ವದಕಾ ನೀಡುವುದು, ವಿಶೇಷ ಅಡುಗೆ ತಯಾರಿಸಿ ರುಚಿ ಸವಿಯುವುದು ಇತ್ಯಾದಿ ಸಾಮಾನ್ಯವಾಗಿತ್ತು.
ಆದರೆ ಕಳೆದ ಬಾರಿಯಂತೆ ಇಂದು ಕೂಡ ಲಾಕ್ ಡೌನ್‌ನಿಂದಾಗಿ ಯಾರೂ ಮಸೀದಿ, ಈದ್ಗಾದತ್ತ ತೆರಳಲಿಲ್ಲ, ಖಬರಸ್ಥಾನ ಸಂದರ್ಶಿಸಲಿಲ್ಲ. ಸಾರ್ವಜನಿಕವಾಗಿ ತಕ್ಬೀರ್ ಮೊಳಗಿಸಲಿಲ್ಲ. ಕೆಲವರು ಲಾಕ್‌ಡೌನ್ ಮುಂಚೆಯೇ ಖರೀದಿಸಿದ್ದ ಹೊಸ ಬಟ್ಟೆಯನ್ನು ಧರಿಸಿದ್ದರೆ, ಇನ್ನು ಕೆಲವರು ಸಾದಾ ಬಟ್ಟೆ ಧರಿಸಿ ಸರಳತೆ ಮೆರೆದರು.
ಈದ್ ಬಟ್ಟೆಬರೆಗಾಗಿ ಮೀಸಲಿಟ್ಟ ಹಣವನ್ನು ಸಾರ್ವಜನಿಕರಿಗೆ ಉಪಯುಕ್ತವಾಗುವ ವಸ್ತುಗಳ ಖರೀದಿಗೆ ಹಸ್ತಾಂತರಿಸಿದರು. ಅರ್ಹರಿಗೆ ಫಿತ್ರ್ ಝಕಾತ್ ತಲುಪಿಸಿದರು.
ಒಟ್ಟಿನಲ್ಲಿ ಉಭಯ ಜಿಲ್ಲೆಯ ಖಾಝಿಗಳ ಕರೆಯಂತೆ ಎಲ್ಲರೂ ಮನೆಯಲ್ಲೇ ಇದ್ದುಕೊಂಡು ಈದ್ ನಮಾಝ್ ಮಾಡಿ ಅತ್ಯಂತ ಸರಳವಾಗಿ ಹಬ್ಬ ಆಚರಿಸಿದರು.
ಕಳೆದ ವರ್ಷವೂ ಕೊರೋನ ಸೋಂಕು ತಡೆಗಾಗಿ ಲಾಕ್‌ಡೌನ್ ವಿಧಿಸಲ್ಪಟ್ಟ ಕಾರಣ ಸರಳವಾಗಿ ಈದ್ ಆಚರಿಸಿದ್ದ ಮುಸ್ಲಿಮರು ಈ ಬಾರಿಯೂ ಸರಳತೆ ಮೆರೆದು ಗಮನ ಸೆಳೆದರು.












