ಪ್ರಧಾನಿ ಪ್ರತಿನಿಧಿಸುವ ವಾರಣಾಸಿ ಕ್ಷೇತ್ರದ ನದಿಯಲ್ಲಿ ತೇಲುತ್ತಿರುವ ಶವಗಳು
ಉನ್ನಾವೊ: ಗಂಗಾ ನದಿ ತೀರದ ಮರಳಿನಲ್ಲಿ ಹೂತುಹಾಕಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಲಕ್ನೊ: ಘಾಜಿಪುರ, ಬಕ್ಸರ್ ಬಳಿಕ ಈಗ ಉತ್ತರಪ್ರದೇಶದ ವಾರಣಾಸಿ ಮತ್ತು ಉನ್ನಾವೊದಲ್ಲಿನ ಗಂಗಾ ನದಿ ನೀರಿನಲ್ಲಿ ಶವಗಳು ಸಂಗ್ರಹವಾಗುತ್ತಿವೆ. ನದಿಯ ವಿವಿಧ ಭಾಗಗಳಲ್ಲಿ ಬುಧವಾರ ನಾಲ್ಕು ಶವಗಳು ಪತ್ತೆಯಾಗಿದ್ದರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಣಾಸಿಯಲ್ಲಿ ಭೀತಿ ಆವರಿಸಿದೆ.
ವಾರಣಾಸಿಯಲ್ಲಿ ನದಿಯಲ್ಲಿ ಎರಡು ಶವಗಳು ತೇಲುತ್ತಿದ್ದರೆ, ಇತರ ಎರಡು ಶವಗಳು ಮರಳಿನ ರಾಶಿಯ ಮೇಲೆ ಬಿದ್ದದ್ದವು. ವಾರಣಾಸಿಯ ಘಾಟ್ ಗಳಾದ್ಯಂತ, ನದಿಯ ಮರಳು ದಂಡೆಯಲ್ಲಿ ಎರಡು ಶವಗಳನ್ನು ಗುರುತಿಸಲಾಗಿದೆ.
ವಾರಣಾಸಿ ಘಾಟ್‌ಗಳಲ್ಲಿದ್ದ ಅಂಬಿಗರು ಮೃತ ದೇಹದಿಂದ ದುರ್ವಾಸನೆ ಬೀರುತ್ತಿರುವ ಬಗ್ಗೆ ದೂರು ನೀಡಿದ್ದು, ಶವಗಳು ಕೋವಿಡ್ -19 ಸಂತ್ರಸ್ತರದ್ದಾಗಿರಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ದಡದ ಇನ್ನೊಂದು ಬದಿಯ ಸ್ಥಳೀಯರು ನದಿ ನೀರಿನಲ್ಲಿ ಶವಗಳನ್ನು ಎಸೆಯುತ್ತಿದ್ದಾರೆ ಎಂದು ಅಂಬಿಗರು ಹೇಳಿದ್ದಾರೆ.
ಏತನ್ಮಧ್ಯೆ, ಉನ್ನಾವೊದಲ್ಲಿ, ಗಂಗಾ ನದಿ ಬಳಿ ಮರಳಿನಲ್ಲಿ ಹೂತುಹಾಕಿದ ಶವಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
"ಕೆಲವರು ಶವಗಳನ್ನು ಸುಡುವುದಿಲ್ಲ. ಆದರೆ ಶವಗಳನ್ನು ನದಿಯ ಮರಳಿನಲ್ಲಿ ಹೂತುಹಾಕುತ್ತಾರೆ. ನಮ್ಮ ತಂಡವು ನದಿಯಿಂದ ದೂರದಲ್ಲಿರುವ ಪ್ರದೇಶದಲ್ಲಿ ಸಮಾಧಿ ಮಾಡಿದ ಶವಗಳನ್ನು ಪತ್ತೆ ಮಾಡಿದೆ. ಇತರ ಪ್ರದೇಶಗಳಲ್ಲಿ ಹೆಚ್ಚಿನ ಶವಗಳಿಗಾಗಿ ಶೋಧ ನಡೆಸಲಾಗುತ್ತಿದೆ. ನನಗೆ ಮಾಹಿತಿ ದೊರೆತ ನಂತರ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿದ್ದೇನೆ. ವಿಚಾರಣೆ ನಡೆಸುವಂತೆ ನಾನು ಅವರನ್ನು ಕೇಳಿದ್ದು, ನಾವು ಕ್ರಮ ಕೈಗೊಳ್ಳುತ್ತೇವೆ" ಎಂದು ಜಿಲ್ಲಾಧಿಕಾರಿ ರವೀಂದ್ರ ಕುಮಾರ್ ಮಾಧ್ಯಮಗಳಿಗೆ ತಿಳಿಸಿದರು
ಗಂಗಾ ನದಿ ಮಧ್ಯದಲ್ಲಿ ತೇಲುತ್ತಿರುವ ಹಲವಾರು ಶವಗಳನ್ನು ಜನರು ನೋಡಿದ್ದಾರೆ. ಉನ್ನಾವೊದಲ್ಲಿನ ಕೆಲವು ಶವಗಳನ್ನು ನಾಯಿಗಳು ತಿನ್ನುತ್ತಿರುವುದನ್ನು ನೋಡಿ ಜನರು ಆತಂಕಗೊಂಡಿದ್ದಾರೆ.
“ಮೂರು ಜಿಲ್ಲೆಗಳ ಸ್ಥಳೀಯರು ಈ ಪ್ರದೇಶದಲ್ಲಿ ಶವಸಂಸ್ಕಾರ ಮಾಡುತ್ತಾರೆ ಹಾಗೂ ಅಂತಿಮ ವಿಧಿಗಳನ್ನು ನಿರ್ವಹಿಸಲು ಸಾಧ್ಯವಾಗದ ಕೆಲವರು ಶವಗಳನ್ನು ಎಸೆದಿರಬೇಕು’’ ಎಂದು ಉನ್ನಾವೊ ಜಿಲ್ಲಾಧಿಕಾರಿ ಹೇಳಿದ್ದಾರೆ.







