ಕೋವಿಶೀಲ್ಡ್ ಎರಡು ಡೋಸ್‌ಗಳ ನಡುವೆ 12-16 ವಾರಗಳ ಅಂತರಕ್ಕೆ ತಜ್ಞರ ಸಮಿತಿ ಶಿಫಾರಸು

ಹೊಸದಿಲ್ಲಿ: ಕೋವಿಶೀಲ್ಡ್ ಕೋವಿಡ್-19 ಲಸಿಕೆಯ ಎರಡು ಡೋಸ್ ಗಳ ನಡುವಿನ ಅಂತರವನ್ನು 12ರಿಂದ 16 ವಾರಗಳಿಗೆ ಹೆಚ್ಚಿಸಬಹುದು ಎಂದು ಸರಕಾರದ ರಾಷ್ಟ್ರೀಯ ತಾಂತ್ರಿಕ ಸಲಹಾ ತಂಡವು (ಎನ್ ಟಿಎಜಿಐ) ಗುರುವಾರ ಶಿಫಾರಸು ಮಾಡಿದೆ.
ಈ ಸಮಯದಲ್ಲಿ ಭಾರತದಲ್ಲಿ ಬಳಕೆಯಲ್ಲಿರುವ ಎರಡು ಲಸಿಕೆಗಳಲ್ಲಿ ಎರಡನೆಯದಾಗಿರುವ ಕೋವಾಕ್ಸಿನ್ ಡೋಸೇಜ್ ಅಂತರದಲ್ಲಿ ಯಾವುದೇ ಬದಲಾವಣೆಗಳನ್ನು ಸೂಚಿಸಲಾಗಿಲ್ಲ. ಇದು ನಾಲ್ಕರಿಂದ ಆರು ವಾರಗಳ ತನಕ ಇರಲಿದೆ.
ಬದಲಾವಣೆಗಳು ಮತ್ತು ಸಲಹೆಗಳನ್ನು ಕಾರ್ಯಗತಗೊಳಿಸುವ ಮೊದಲು ಅನುಮೋದನೆಗಾಗಿ ಈ ಶಿಫಾರಸುಗಳನ್ನು ಲಸಿಕೆ ಆಡಳಿತದ ರಾಷ್ಟ್ರೀಯ ತಜ್ಞರ ಗುಂಪಿಗೆ ಕಳುಹಿಸಲಾಗುತ್ತದೆ.
ಮೂರು ತಿಂಗಳಲ್ಲಿ ಇದು ಎರಡನೇ ಬಾರಿಗೆ ಕೋವಿಶೀಲ್ಡ್ ಡೋಸೇಜ್ ಮಧ್ಯಂತರವನ್ನು ವಿಸ್ತರಿಸಲಾಗಿದೆ. ,ಮಾರ್ಚ್ ನಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತಗಳು "ಉತ್ತಮ ಫಲಿತಾಂಶಗಳಿಗಾಗಿ" ಅಂತರವನ್ನು 28 ದಿನಗಳಿಂದ ಆರ ರಿಂದ ಎಂಟು ವಾರಗಳಿಗೆ ಹೆಚ್ಚಿಸಲು ತಿಳಿಸಲಾಯಿತು. ಇದೀಗ ಮೊದಲ ಡೋಸ್ ಪಡೆದು 12ರಿಂದ 16 ವಾರಗಳಲ್ಲಿ ಎರಡನೇ ಡೋಸ್ ಹಾಕಿಸಿಕೊಳ್ಳಲು ರಾಷ್ಟ್ರೀಯ ತಾಂತ್ರಿಕ ಸಲಹಾ ತಂಡವು ಶಿಫಾರಸು ಮಾಡಿದೆ.
ಈ ಬದಲಾವಣೆಗಳನ್ನು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ವ್ಯಂಗ್ಯವಾಡಿದ್ದಾರೆ.
"ಮೊದಲು, ಇದು 2 ನೇ ಡೋಸ್‌ಗೆ ನಾಲ್ಕು ವಾರಗಳು, ನಂತರ ಆರರಿಂದ ಎಂಟು ವಾರಗಳು ,ಈಗ ನಮಗೆ 12-16 ವಾರಗಳು ಎಂದು ಹೇಳಲಾಗುತ್ತದೆ. ಯಾಕೆಂದರೆ ಅರ್ಹತೆ ಇರುವ ಎಲ್ಲರಿಗೂ ಲಸಿಕೆಗಳ ಸಾಕಷ್ಟು ದಾಸ್ತಾನು ಇಲ್ಲದಿರುವುದು ಅಥವಾ ವೃತ್ತಿಪರ ವೈಜ್ಞಾನಿಕ ಸಲಹೆ ಹೀಗೆ ಹೇಳುತ್ತದೆ ? ಎಂದು ರಮೇಶ್ ಟ್ವೀಟಿಸಿದರು.







