"ದೇವಸ್ಥಾನಗಳು, ಮೂರ್ತಿಗಳು, ಪ್ರಧಾನಿ ನಿವಾಸ ನಿರ್ಮಿಸುವ ಬದಲು, ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಬೇಕಿದೆ"
ಕೋವಿಡ್‍ನಿಂದ ಮೃತಪಟ್ಟ ಪಂಡಿತ್ ರಾಜನ್ ಮಿಶ್ರಾ ಪುತ್ರ ರಜನೀಶ್

ಹೊಸದಿಲ್ಲಿ: ದೇವಸ್ಥಾನಗಳು, ಮೂರ್ತಿಗಳು ಹಾಗೂ ಪ್ರಧಾನಿಯ ಹೊಸ ನಿವಾಸದ ಬದಲು ಕೇಂದ್ರ ಸರಕಾರ ದೇಶದ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಬೇಕಿದೆ ಎಂದು ಕಳೆದ ತಿಂಗಳು ಕೋವಿಡ್ ಸಂಬಂಧಿ ಸಮಸ್ಯೆಗಳಿಂದ ನಿಧನರಾದ ಖ್ಯಾತ ಹಿಂದುಸ್ತಾನಿ ಗಾಯಕ ಪಂಡಿತ್ ರಾಜನ್ ಮಿಶ್ರಾ ಅವರ ಪುತ್ರ ರಜನೀಶ್ ಮಿಶ್ರಾ ಹೇಳಿದ್ದಾರೆ.
"ಸೂಕ್ತ ಚಿಕಿತ್ಸೆ ದೊರೆತಿದ್ದರೆ ಬದುಕುಳಿಯುತ್ತಿದ್ದ ಆದರೆ ಚಿಕಿತ್ಸೆ ಲಭಿಸದೇ ಇದ್ದ ಪಂಡಿತ್‍ಜೀ ಅವರಂತಹ ಒಬ್ಬ ವ್ಯಕ್ತಿ, ಒಬ್ಬ ಪದ್ಮ ಭೂಷಣ ಪ್ರಶಸ್ತಿ ವಿಜೇತ ಅವರಿಗೆ ಹೀಗಾಗಿದ್ದರೆ ಜನಸಾಮಾನ್ಯರ ಗತಿಯೇನು,?" ಎಂದು ರಜನೀಶ್ ಪ್ರಶ್ನಿಸಿದ್ದಾರೆ.
"ತಂದೆ ಈಗ ಆಸ್ಪತ್ರೆ ನೋಡಲು ಬರುವುದಿಲ್ಲ ಹಾಗೂ ರಾಮ್ ಜೀ ಕೂಡ ಅಯ್ಯೋಧ್ಯೆಯಲ್ಲಿನ ದೇವಸ್ಥಾನ ನೋಡಲು ಬರುವುದಿಲ್ಲ, ಈಗ ದೇಶಕ್ಕೆ ಉತ್ತಮ ಸವಲತ್ತುಗಳಿರುವ ಆಸ್ಪತ್ರೆ ಬೇಕಿದೆ" ಎಂದು ಹೇಳಿದ ಅವರು "ದೇವಸ್ಥಾನ, ಮೂರ್ತಿಗಳು ಹಾಗೂ ಸಾವಿರಾರು ಕೋಟಿ ರೂಪಾಯಿ ಬಳಸಿ ಪ್ರಧಾನಿಗೆ ಹೊಸ ಮನೆ ನಿರ್ಮಿಸುವ ಬದಲು ಸರಕಾರ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಬೇಕಿದೆ.
ಜನಸಾಮಾನ್ಯ ಮತ್ತಾತನ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಬೇಕೆಂದು ಸರಕಾರವನ್ನು ಕೋರುತ್ತೇನೆ. ಯಾರಾದರೂ ನಮ್ಮನ್ನಗಲಿದಾಗ ಅದು ಬಹಳಷ್ಟು ನೋವುಂಟು ಮಾಡುತ್ತದೆ. ನಾವೆಲ್ಲರೂ ಆ ನೋವನ್ನು ಅನುಭವಿಸಬೇಕು. ಒಬ್ಬ ವ್ಯಕ್ತಿ ಸತ್ತ ಮೇಲೆ ಸ್ಮಾರಕಗಳನ್ನು ನಿರ್ಮಿಸಿ ಅಥವಾ ಪ್ರಶಸ್ತಿ ನೀಡಿ ಪ್ರಯೋಜನವಿಲ್ಲ, ನಿಮ್ಮಲ್ಲಿ ದೇವಸ್ಥಾನಗಳು, ಪ್ರಧಾನಿ ನಿವಾಸ ಅಥವಾ ರಾಷ್ಟ್ರಪತಿ ಭವನ ನಿರ್ಮಿಸಲು ಹಣವಿದ್ದರೆ, ಅದು ಕಾಯಬಹುದು,. ಈಗ ಆ ಹಣವನ್ನು ದೇಶದ ಆರೋಗ್ಯ ಸೇವಾ ವ್ಯವಸ್ಥೆಗೆ ವಿನಿಯೊಗಿಸಬೇಕಿದೆ,'' ಎಂದು ಅವರು ಹೇಳಿದರು.
ದಿಲ್ಲಿಯ ಸೈಂಟ್ ಸ್ಟೀಫನ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಪಂಡಿತ್ ರಾಜನ್ ಮಿಶ್ರಾ ಅವರಿಗೆ ವೆಂಟಿಲೇಟರ್ ತುರ್ತಾಗಿ ಅಗತ್ಯವಿದ್ದರೂ ಅದು ಲಭಿಸಿರಲಿಲ್ಲ, ಕೊನೆಗೆ ಪ್ರಧಾನಿ ಕಾರ್ಯಾಲಯ ಸಹಾಯ ಮಾಡಲು ಮುಂದೆ ಬಂದಿತ್ತಾದರೂ ಅಷ್ಟರೊಳಗಾಗಿ ರಾಜನ್ ಮಿಶ್ರಾ ಅವರು ಕೊನೆಯುಸಿರೆಳೆದಿದ್ದರು ಎಂದು ರಜನೀಶ್ ಹೇಳಿದ್ದಾರೆ.







