ಎನ್‍ಆರ್ಸಿ ಮರುಪರಿಶೀಲನೆಗೆ ಸುಪ್ರೀಂ ಕೋರ್ಟ್‍ಗೆ ಮನವಿ ಸಲ್ಲಿಸಲಿರುವ ಅಸ್ಸಾಂ ಸರಕಾರ

ಗುವಾಹಟಿ: ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ ಅಥವಾ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಮರು-ಪರಿಶೀಲಿಸಲು ತಮ್ಮ ಸರಕಾರ ಸುಪ್ರೀಂ ಕೋರ್ಟಿನ ಮೊರೆ ಹೋಗುವುದಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರ್ಮ ಹೇಳಿದ್ದಾರೆ.
ಬಾಂಗ್ಲಾದೇಶ ಗಡಿ ಸಮೀಪದ ಪ್ರದೇಶಗಳ ಎನ್‍ಆರ್‍ಸಿಯ ಶೇ20ರಷ್ಟು ಎಂಟ್ರಿಗಳನ್ನು ಹಾಗೂ ಒಳನಾಡು ಪ್ರದೇಶಗಳ ಶೇ10ರಷ್ಟು ಎಂಟ್ರಿಗಳ ಮರುಪರಿಶೀಲನೆಗೆ ಕೋರಲಾಗುವುದು ಎಂದು ಸೀಎಂ ಹೇಳಿದ್ದಾರೆ.
ಎನ್‍ಆರ್‍ಸಿಯಲ್ಲಿ ಕೆಲವೊಂದು ವ್ಯತ್ಯಯಗಳಿದ್ದರೆ ಅದರ ಕುರಿತಂತೆ ಸುಪ್ರೀಂ ಕೋರ್ಟಿನ ಮಾರ್ಗದರ್ಶನ ಕೋರಲಾಗುವುದು. ನಾವು ಇದನ್ನು ಈ ಹಿಂದೆಯೂ ಹೇಳುತ್ತಿದ್ದೆವು ಹಾಗೂ ಈಗಲೂ ಅದಕ್ಕೆ ಬದ್ಧರಾಗಿದ್ದೇವೆ ಎಂದು ಅವರು ಹೇಳಿದರು.
ಜುಲೈ 2019ರಲ್ಲಿ ಎನ್‍ಆರ್ಸಿ ಮರುಪರಿಶೀಲನೆಗೆ ಕೇಂದ್ರ ಸರಕಾರ ಮತ್ತು ಅಸ್ಸಾಂ ಸರಕಾರ ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿದ್ದರೂ ಈ ಪ್ರಕ್ರಿಯೆಯನ್ನು ನೋಡಿಕೊಂಡಿದ್ದ ಅಧಿಕಾರಿ ಪ್ರತೀಕ್ ಹಜೇಲಾ ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿ ಶೇ27ರಷ್ಟು ಹೆಸರುಗಳನ್ನು ಅದಾಗಲೇ ಮರುಪರಿಶೀಲಿಸಲಾಗಿದೆ ಎಂದು ಹೇಳಿದ ನಂತರ ಅಪೀಲನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.





