ಕೋವಿಡ್ ರೋಗಿಗಳ ಲಸಿಕೆ, ಔಷಧಿ ಮೇಲಿನ ಜಿಎಸ್ ಟಿ ಮನ್ನಾ ಮಾಡಿ: ಕೇಂದ್ರಕ್ಕೆ ತಮಿಳುನಾಡು ಸಿಎಂ ಒತ್ತಾಯ

ಚೆನ್ನೈ: ಕೋವಿಡ್ -19 ಲಸಿಕೆಗಳು ಹಾಗೂ ಇತರ ಔಷಧಿಗಳನ್ನು ರಾಜ್ಯ ಸರ್ಕಾರಗಳೇ ಖರೀದಿಸುತ್ತಿರುವುದರಿಂದ ನಿರ್ದಿಷ್ಟ ಅವಧಿಗೆ ಕೋವಿಡ್ -19 ಲಸಿಕೆಗಳು ಹಾಗೂ ಔಷಧಿಗಳ ಜಿಎಸ್ ಟಿ ಮನ್ನಾ ಮಾಡಬೇಕೆಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಗುರುವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದ್ದಾರೆ.
ಬಾಕಿ ಉಳಿದಿರುವ ಜಿಎಸ್ ಟಿ ಪರಿಹಾರ ಹಾಗೂ ಅಕ್ಕಿ ಸಬ್ಸಿಡಿಯನ್ನು ತಕ್ಷಣ ವಿತರಿಸುವುದು, ರಾಜ್ಯದ ಸಾಲ ಮಿತಿಯನ್ನು ರಾಜ್ಯ ಜಿಡಿಪಿಯ 3 ಶೇ. ರಿಂದ 4 ಶೇ.ಕ್ಕೆ ಹೆಚ್ಚಿಸುವುದು ಹಾಗೂ ನಷ್ಟವನ್ನು ಸರಿದೂಗಿಸಲು ತಾತ್ಕಾಲಿಕ ಅನುದಾನ ಸಹಾಯವನ್ನು ಒಳಗೊಂಡಂತೆ ಅವರು ಪ್ರಧಾನಮಂತ್ರಿಗೆ ಕೆಲವು ವಿನಂತಿಗಳನ್ನು ಕೂಡ ಮಾಡಿದರು.
ಎಲ್ಲಾ ರಾಜ್ಯಗಳು ಕೋವಿಡ್-19 ಲಸಿಕೆಗಳನ್ನು ಹಾಗೂ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುವ ಔಷಧಿಗಳನ್ನು ಸಂಗ್ರಹಿಸುತ್ತಿವೆ. ಇದನ್ನು ಪರಿಗಣಿಸಿ, ಜಿಎಸ್ ಟಿ ಕೌನ್ಸಿಲ್ ನೊಂದಿಗೆ ಸಮಾಲೋಚಿಸಿ, ಕೇಂದ್ರವು ಲಸಿಕೆಗಳು ಹಾಗೂ ಔ ಷಧಿಗಳಿಗೆ ನಿರ್ದಿಷ್ಟ ಅವಧಿಗೆ ಶೂನ್ಯ ದರವನ್ನು ನಿಗದಿಪಡಿಸಬೇಕು ಎಂದು ಅಧಿಕೃತ ಹೇಳಿಕೆಯೊಂದರಲ್ಲಿ ತಿಳಿಸಿದೆ.