ಒಂದೇ ಶ್ವಾಸಕೋಶವಿದ್ದರೂ ಕೊರೋನ ಸೋಂಕು ಗೆದ್ದ ನರ್ಸ್

ಸಾಂದರ್ಭಿಕ ಚಿತ್ರ
ಭೋಪಾಲ್: ಮಧ್ಯಪ್ರದೇಶ ನರ್ಸ್ ವೊಬ್ಬರು ಒಂದೇ ಶ್ವಾಸಕೋಶವಿದ್ದರೂ 14 ದಿನಗಳಲ್ಲಿ ಕೋವಿಡ್-19ನಿಂದ ಗುಣಮುಖರಾಗಿದ್ದಾರೆ.
ಟಿಕಮ್ ಘರ್ ಜಿಲ್ಲೆಯ ಸಿವಿಲ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಪ್ರಫಲ್ಲಿಟ್ ಪೀಟರ್ (39 ವರ್ಷ) ಅವರಿಗೆ ಸೋಂಕು ದೃಢಪಟ್ಟ ಬಳಿಕ 14 ದಿನಗಳ ಕಾಲ ಹೋಮ್ ಐಸೋಲೇಶನ್ ನಲ್ಲಿದ್ದು, ಕೊರೋನ ಸೋಂಕನ್ನು ಯಶಸ್ವಿಯಾಗಿ ಎದುರಿಸಿದ್ದಾರೆ.
ಮಧ್ಯಪ್ರದೇಶದ ಟಿಕಮ್ ಘರ್ ಸಿವಿಲ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿಗೆ ಚಿಕಿತ್ಸೆ ಪಡೆದಿರುವ 39 ವರ್ಷದ ಪ್ರಫುಲಿಟ್ ಅವರು ಬಾಲ್ಯದಲ್ಲಿಯೇ ಶ್ವಾಸಕೋಶವೊಂದನ್ನು ಕಳೆದುಕೊಂಡಿದ್ದರು.
ಕೊರೋನ ಸೋಂಕಿಗೆ ಒಳಗಾಗಿದ್ದಾಗ ಪ್ರಫುಲ್ಲಿಟ್ ಅವರನ್ನು ಆಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿಡಲಾಗಿತ್ತು. ಕೋವಿಡ್ ಪಾಸಿಟಿವ್ ನಂತರ ಸೋಂಕನ್ನುಗೆಲ್ಲುವುದು ಪ್ರಫುಲ್ಲಿಟ್ ಅವರಿಗೆ ಕಷ್ಟವಾಗಬಹುದೆಂದು ಕುಟುಂಬ ಸದಸ್ಯರು ತುಂಬಾ ಆತಂಕದಲ್ಲಿದ್ದರು. ಆದರೆ ಪ್ರಫುಲ್ಲಿಟ್ ಅವರು 14 ದಿನಗಳ ಕಾಲ ಮನೆಯಲ್ಲಿ ಪ್ರತ್ಯೇಕವಾಗಿದ್ದು, ಕೋವಿಡ್ ನಿಂದ ಚೇತರಿಸಿಕೊಂಡಿದ್ದಾರೆ.
ನಾನು ಧೈರ್ಯವನ್ನು ಕಳೆದುಕೊಳ್ಳಲಿಲ್ಲ. ನಿಯಮಿತವಾಗಿ ಯೋಗ, ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮ ಮಾಡುವ ಮೂಲಕ ಗುಣಮುಖವಾಗಿದ್ದೇನೆ ಎಂದು ಪ್ರಫುಲ್ಲಿಟ್ ಹೇಳಿದ್ದಾರೆ.







