ದೇಶದಲ್ಲಿ ಕೋವಿಡ್-19 ಸಾವಿನ ದರ ಹೆಚ್ಚಳ

ಹೊಸದಿಲ್ಲಿ, ಮೇ 14: ದೇಶದಲ್ಲಿ ಕೋವಿಡ್-19 ಹೊಸ ಪ್ರಕರಣಗಳು ನಿಧಾನವಾಗಿ ಇಳಿಕೆಯಾಗುತ್ತಿದ್ದರೂ, ಸಾವಿನ ಸಂಖ್ಯೆ ಮಾತ್ರ ಆತಂಕಕಾರಿ ಪ್ರಮಾಣದಲ್ಲೇ ಮುಂದುವರಿದಿದೆ. ಮೇ ತಿಂಗಳಲ್ಲಿ ದೇಶದಲ್ಲಿ ಇದುವರೆಗಿನ ಅತ್ಯಧಿಕ ಮರಣ ದರ ದಾಖಲಾಗಿದೆ.
ಬುಧವಾರ 3,62,270 ಸೋಂಕು ಪ್ರಕರಣಗಳು ಭಾರತದಲ್ಲಿ ದಾಖಲಾಗಿದ್ದವು. ಗುರುವಾರ ಈ ಸಂಖ್ಯೆ ಸುಮಾರು 20 ಸಾವಿರದಷ್ಟು ಕಡಿಮೆಯಾಗಿ 3,43,122 ಆಗಿದೆ. ಕಳೆದ 24 ಗಂಟೆಯಲ್ಲಿ ದೇಶಾದ್ಯಂತ 3,994 ಮಂದಿ ಕೋವಿಡ್-19 ಸಂಬಂಧಿ ಸಮಸ್ಯೆಗಳಿಂದ ಮೃತಪಟ್ಟಿದ್ದಾರೆ. ದೇಶದಲ್ಲಿ ಒಂದೇ ದಿನ ಗರಿಷ್ಠ ಅಂದರೆ 4,205 ಸಾವು ಮಂಗಳವಾರ ಸಂಭವಿಸಿತ್ತು.
ಮೇ 8ರಂದು ಅಂತ್ಯವಾದ ವಾರದಲ್ಲಿ 3.91 ಲಕ್ಷ ಇದ್ದ ದೈನಿಕ ಸರಾಸರಿ ಪ್ರಕರಣಗಳ ಸಂಖ್ಯೆ ಗುರುವಾರ 3.64 ಲಕ್ಷಕ್ಕೆ ಇಳಿದಿದೆ. ಆದರೆ ಏಳು ದಿನಗಳ ದೈನಿಕ ಸಾವಿನ ಸಂಖ್ಯೆ ಮಾತ್ರ 4,000ಕ್ಕಿಂತ ಅಧಿಕ ಅಂದರೆ 4,039ರಷ್ಟಿದೆ. ಪ್ರಕರಣಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ಸಾವಿನ ದರ ಅಧಿಕವಾಗಿದೆ. ಎಪ್ರಿಲ್‌ನಲ್ಲಿ ಒಟ್ಟು ಸೋಂಕಿತರ ಪೈಕಿ 0.7ರಷ್ಟು ಮಂದಿ ಅಸುನೀಗಿದ್ದರೆ, ಇದೀಗ ಈ ಪ್ರಮಾಣ ಶೇಕಡ 1.1ಕ್ಕೇರಿದೆ.
ಈ ನಡುವೆ ಹಲವು ರಾಜ್ಯಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಗರಿಷ್ಠ 5,0112 ಪ್ರಕರಣಗಳನ್ನು ಕಂಡಿದ್ದ ಕರ್ನಾಟಕದಲ್ಲಿ ಗುರುವಾರ ಹೊಸ ಪ್ರಕರಣಗಳ ಸಂಖ್ಯೆ 35,297 ಆಗಿದೆ. ದಿಲ್ಲಿ (10489), ಉತ್ತರ ಪ್ರದೇಶ (17775), ಛತ್ತೀಸ್‌ಗಢ (9121), ಮಧ್ಯಪ್ರದೇಶ (8419), ಬಿಹಾರ (7752) ಮತ್ತು ತೆಲಂಗಾಣ (4693) ಕೂಡಾ ಪ್ರಕರಣಗಳು ಇಳಿಮುಖವಾಗುತ್ತಿವೆ. ತಮಿಳುನಾಡು (30621) ಮತ್ತು ಬಂಗಾಳ (20839) ಮಾತ್ರ ಇದುವರೆಗಿನ ಗರಿಷ್ಠ ಸಂಖ್ಯೆಯನ್ನು ಗುರುವಾರ ದಾಖಲಿಸಿವೆ.