ವಲಸೆ ಕಾರ್ಮಿಕರಿಗೆ ಅಗತ್ಯ ಸೌಕರ್ಯ ಒದಗಿಸಿ: ಸುಪ್ರೀಂ ಕೋರ್ಟ್ ತಾಕೀತು

ಹೊಸದಿಲ್ಲಿ: ಕೋವಿಡ್-19 ಎರಡನೇ ಅಲೆಯ ಅಬ್ಬರದಿಂದ ತೊಂದರೆಗೀಡಾಗಿರುವ ವಲಸೆ ಕಾರ್ಮಿಕರ 'ಕಠಿಣ ವಾಸ್ತವ'ವನ್ನು ಅರಿತುಕೊಂಡು ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ಸಿಆರ್)ನಲ್ಲಿರುವ ವಲಸೆ ಕಾರ್ಮಿಕರಿಗೆ ಪಡಿತರ ಹಾಗೂ ಊಟೋಪಚಾರದ ವ್ಯವಸ್ಥೆ ಮಾಡುವಂತೆ ಸುಪ್ರೀಂಕೋರ್ಟ್, ಕೇಂದ್ರ ಹಾಗೂ ಸಂಬಂಧಿತ ರಾಜ್ಯ ಸರ್ಕಾರಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಕೇಂದ್ರ ಸರ್ಕಾರ, ದಿಲ್ಲಿ, ಹರ್ಯಾಣ ಮತ್ತು ಉತ್ತರ ಪ್ರದೇಶ ರಾಜ್ಯ ಸರ್ಕಾರಗಳು, ವಲಸೆ ಕಾರ್ಮಿಕರು ತಮ್ಮ ಮನೆಗಳಿಗೆ ತೆರಳಲು ಅಗತ್ಯ ಸಾರಿಗೆ ವ್ಯವಸ್ಥೆಯನ್ನು ಖಾತರಿಪಡಿಸಬೇಕು ಎಂದೂ ನ್ಯಾಯಾಲಯ ನಿರ್ದೇಶಿಸಿದೆ.
ನ್ಯಾಯಮೂರ್ತಿ ಅಶೋಕ್ ಭೂಷಣ್ ಮತ್ತು ಎಂ.ಆರ್.ಶಾ ಅವರನ್ನು ಒಳಗೊಂಡ ನ್ಯಾಯಪೀಠ ಈ ಮಧ್ಯಂತರ ನಿರ್ದೇಶನಗಳನ್ನು ನೀಡಿದೆ. ವಲಸೆ ಕಾರ್ಮಿಕರ ಈ ದಯನೀಯ ಸ್ಥಿತಿಗೆ ಸ್ಪಂದನಾತ್ಮಕವಾಗಿ ಕೈಗೊಂಡ ಕ್ರಮಗಳ ಬಗ್ಗೆ ವಿವರ ನೀಡುವಂತೆಯೂ ಆದೇಶಿಸಿದೆ.
ಆತ್ಮನಿರ್ಭರ ಭಾರತ ಅಥವಾ ಇತರ ಯಾವುದೇ ಯೋಜನೆಯಡಿ ಕೇಂದ್ರದಿಂದ ಪಡಿತರ ಪಡೆದು ಅಗತ್ಯ ಪಡಿತರ ವಸ್ತುಗಳನ್ನು ಈ ಕಾರ್ಮಿಕ ವರ್ಗಕ್ಕೆ ನೀಡಬೇಕು ಎಂದು ಸೂಚಿಸಿದೆ. ಪಡಿತರ ನೀಡುವ ವೇಳೆ ಅವರ ಗುರುತಿನ ಚೀಟಿ ಹಾಜರುಪಡಿಸುವಂತೆ ಕಡ್ಡಾಯಪಡಿಸಬಾರದು. ಸಿಕ್ಕಿಹಾಕಿಕೊಂಡಿರುವ ವಲಸೆ ಕಾರ್ಮಿಕರು ಒಂದು ಸ್ವಯಂ ಘೋಷಣಾ ಪತ್ರವನ್ನು ನೀಡಿದಲ್ಲಿ ಅದರ ಆಧಾರದಲ್ಲಿ ಪಡಿತರ ಒದಗಿಸಬೇಕು ಎಂದು ಸ್ಪಷ್ಟ ಸೂಚನೆ ನೀಡಿದೆ.
ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬದವರು ದಿನಕ್ಕೆ ಕನಿಷ್ಠ ಎರಡು ಊಟವನ್ನಾದರೂ ಪಡೆಯಲು ಅನುವಾಗುವಂತೆ ವ್ಯವಸ್ಥೆ ಮಾಡಬೇಕು. ದಿಲ್ಲಿ, ಉತ್ತರ ಪ್ರದೇಶ ಮತ್ತು ಹರ್ಯಾಣ ರಾಜ್ಯ ಸರ್ಕಾರಗಳು ಮುಕ್ತ ಸಮುದಾಯ ಪಾಕಶಾಲೆಗಳನ್ನು ತೆರೆದು ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ಸಲಹೆ ಮಾಡಿದೆ. ತಮ್ಮ ಮನೆಗಳಿಗೆ ವಾಪಸ್ ತೆರಳಲು ಬಯಸುವ ಕಾರ್ಮಿಕರಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಮಾಡುವಂತೆಯೂ ಆದೇಶ ನೀಡಿದೆ.







