ಚಂಡಮಾರುತ ಪರಿಣಾಮ: ಉಳ್ಳಾಲ ಸೋಮೇಶ್ವರದಲ್ಲಿ ಕಡಲು ಪ್ರಕ್ಷುಬ್ಧ

ಉಳ್ಳಾಲ, ಮೇ 14: ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಉದ್ಭವಿಸಿರುವ ಚಂಡಮಾರುತದಿಂದಾಗಿ ಉಳ್ಳಾಲ ಸೋಮೇಶ್ವರದಲ್ಲಿ ಕಡಲಿನಬ್ಬರ ತೀವ್ರಗೊಂಡಿದೆ. ಸೋಮೇಶ್ವರ ಹಿಂದೂ ರುದ್ರಭೂಮಿ ಕಾಂಪೌಂಡ್ ಗೋಡೆಗೆ ಅಲೆಗಳು ಅಪ್ಪಳಿಸಲಾರಂಭಿಸಿದೆ. ಇದರಿಂದ ಆವರಣ ಗೋಡೆ ಅಪಾಯದಂಚಿನಲ್ಲಿದೆ.
ಸೋಮೇಶ್ವರ ನಿವಾಸಿ ಮೋಹನ್ ಎಂಬವರ ಮನೆಯ ಗೋಡೆಗೂ ದೈತ್ಯ ಅಲೆ ಅಪ್ಪಳಿಸಲಾರಂಭಿಸಿದೆ. ಇದರಿಂದ ಭೀತಿಯಲ್ಲಿ ಇಲ್ಲಿನ ನಿವಾಸಿಗಳು ಇದ್ದಾರೆ. ಉಚ್ಚಿಲ ಸೋಮೇಶ್ವರದಲ್ಲಿ ಸಮುದ್ರ ಪ್ರಕುಬ್ಧಗೊಂಡಿದೆ. ಬುಧವಾರ ಸುರಿದ ಭಾರೀ ಮಳೆ ಹಾಗೂ ಪಶ್ಚಿಮ ಸಮುದ್ರದಲ್ಲಿ ಎದ್ದಿರುವ ಚಂಡಮಾರುತದ ಪರಿಣಾಮವಾಗಿ ಸೋಮೇಶ್ವರದಲ್ಲಿ ಶುಕ್ರವಾರ ಮತ್ತೆ ಕಡಲಿನಬ್ಬರ ತೀವ್ರಗೊಂಡಿದೆ. ಸೋಮೇಶ್ವರ, ಉಚ್ಚಿಲ, ಪೆರಿಬೈಲ್ ಬೆಟ್ಟಂಪಾಡಿ ಮುಂತಾದಡೆಗಳಲ್ಲಿ ಕಡಲ ಅಬ್ಬರ ತೀವ್ರಗೊಂಡಿದೆ.
ಬೆಟ್ಟಂಪಾಡಿಯಿಂದ ಉಚ್ಚಿಲ ವರೆಗೆ ಕಡಲ್ಕೊರೆತ ತಡೆಯಲು ಹಾಕಲಾದ ಕಲ್ಲು ಸಮುದ್ರದ ಒಡಲು ಸೇರಲಾರಂಭಿಸಿದೆ. ಸೋಮೇಶ್ವರ ಹಿಂದೂ ರುದ್ರಭೂಮಿ ಬಳಿ ತಡೆಗೋಡೆ ಇಲ್ಲದ ಕಾರಣ ಕಾಂಪೌಂಡ್ ಗೋಡೆಗೆ ಅಲೆ ಜೋರಾಗಿ ಅಪ್ಪಳಿಸುತ್ತಿದೆ. ಇದರಿಂದ ಭೀತಿಗೊಳಗಾದ ಜನರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ವಾಣಿ, ತಹಶೀಲ್ದಾರ್ ಗುರುಪ್ರಸಾದ್, ಹಾಗೂ ಬಂದರ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.









