ಹಾಸಿಗೆ ವಿಚಾರದಲ್ಲಿ ತಪ್ಪು ಲೆಕ್ಕ ಕೊಟ್ಟಿದ್ದ ಖಾಸಗಿ ಆಸ್ಪತ್ರೆಗಳ ಬಣ್ಣ ಬಯಲು: ಸಚಿವ ಆರ್.ಅಶೋಕ್

ಬೆಂಗಳೂರು, ಮೇ 14: ಸರಕಾರಕ್ಕೆ ನಿಗದಿತ ಹಾಸಿಗೆಗಳನ್ನ ನೀಡದೆ ಅನೇಕ ಖಾಸಗಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳು ಕಣ್ಣಾ ಮುಚ್ಚಾಲೆ ಆಡುತ್ತಿದ್ದವು. ಈ ಕಾರಣಕ್ಕೆ ಅಧಿಕಾರಿಗಳ ತಂಡ ಪಿಪಿಇ ಕಿಟ್ ಧರಿಸಿ ಆಸ್ಪತ್ರೆಯೊಳಗೆ ಪ್ರವೇಶಿಸಿ ರಿಯಾಲಿಟಿ ಚೆಕ್ ಮಾಡಿದಾಗ ಸದ್ಯ ರಾಜರಾಜೇಶ್ವರಿ ಹಾಗೂ ವೈದೇಹಿ ಆಸ್ಪತ್ರೆಗಳು ಸರಕಾರಕ್ಕೆ ತಪ್ಪು ಮಾಹಿತಿ ನೀಡಿದ ಸಂಗತಿ ಬೆಳಕಿಗೆ ಬಂದಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಮಾತನಾಡಿದ ಅವರು, ಇದೀಗ ಮೇಲ್ಕಂಡ ಖಾಸಗಿ ಆಸ್ಪತ್ರೆಗಳು ನಿಗದಿತ ಹಾಸಿಗೆಗಳನ್ನ ನೀಡಲು ಒಪ್ಪಿಕೊಂಡಿದ್ದಾರೆ. ಈ ಮೂಲಕ ಅನೇಕ ಆಸ್ಪತ್ರೆಗಳಿಂದ ಸರಕಾರಕ್ಕೆ ಹೆಚ್ಚುವರಿಯಾಗಿ ಒಟ್ಟು 2,216 ಹಾಸಿಗೆಗಳು ಲಭ್ಯವಾಗಿವೆ. ಆಕ್ಸಿಜನ್ ಅಭಾವ ನೀಗಿಸುವ ನಿಟ್ಟಿನಲ್ಲಿಯೂ ಸಾಕಷ್ಟು ಕ್ರಮಗಳನ್ನ ಕೈಗೊಳ್ಳಲಾಗುತ್ತಿದ್ದು, ಆ ಪ್ರಕಾರವಾಗಿ ತುರ್ತು ಸಂದರ್ಭದಲ್ಲಿ ಸೋಂಕಿತರಿಗೆ ಆಮ್ಲಜನಕ ಒದಗಿಸುವ ವಿಶಿಷ್ಟ ಸೌಲಭ್ಯವುಳ್ಳ 'ಆಕ್ಸಿಜನ್ ಆನ್ ವ್ಹೀಲ್ಸ್' ಬಸ್ ಸೇವೆಯನ್ನ ಪರಿಚಯಿಸಿದ್ದೇವೆ' ಎಂದರು.
'ಜಿಕೆವಿಕೆ ಆರೈಕೆ ಕೇಂದ್ರದಲ್ಲಿ 380 ಹಾಸಿಗೆಗಳನ್ನ ವ್ಯವಸ್ಥೆ ಮಾಡಲಾಗಿದೆ. ಈಗ ಬಹಳಷ್ಟು ಜನ ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಾಗಲು ಬರುತ್ತಿದ್ದಾರೆ. ಒಟ್ಟು 1,600 ಹಾಸಿಗೆಗಳು ಕೋವಿಡ್ ಆರೈಕೆ ಕೇಂದ್ರದಲ್ಲಿ ಲಭ್ಯವಿವೆ ಎಂದ ಅವರು, ಶವ ಸಂಸ್ಕಾರದ ವಿಚಾರದಲ್ಲಿ ಸಾಕಷ್ಟು ತೊಂದರೆಗಳು ಆಗುತ್ತಿರುವುದು ಸರಕಾರಕ್ಕೂ ಸಾಕಷ್ಟು ಕಳವಳದ ಸಂಗತಿಯಾಗಿತ್ತು. ಇದಕ್ಕಾಗಿ ಸರಕಾರದ ವತಿಯಿಂದ ಉಚಿತ ಶವ ವಾಹನದ ವ್ಯವಸ್ಥೆ ಮಾಡಲಾಗಿದ್ದು, ಚಿತಾಗಾರಕ್ಕೆ ಶವ ಕೊಂಡೊಯ್ಯಲು ಈ ಸೇವೆ ಲಭ್ಯವಿರಲಿದೆ.
ಇದಕ್ಕಾಗಿ 24/7 ಸಹಾಯವಾಣಿ ತೆರೆಯಲಾಗಿದ್ದು, 19 ಜನ ಸಿಬ್ಬಂದಿ ಮೂರು ಪಾಳೆಯಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಇಲ್ಲಿಗೆ ಕರೆ ಮಾಡಿದರೆ ಸಿಬ್ಬಂದಿ ನಿಗದಿತ ಸಮಯ ನೀಡಿ, ಆ ಸಮಯಕ್ಕೆ ಶವವನ್ನ ಚಿತಾಗಾರಕ್ಕೆ ಸಾಗಿಸಲು ಉಚಿತ ಶವ ವಾಹನದ ವ್ಯವಸ್ಥೆ ಮಾಡಿಕೊಡುತ್ತಾರೆ. ಇದಕ್ಕಾಗಿ ಸಹಾಯವಾಣಿ ಸಂಖ್ಯೆ 84959 98495 ಗೆ ಕರೆ ಮಾಡಬಹುದು ಎಂದು ಸಚಿವ ಅಶೋಕ್ ಇದೇ ವೇಳೆ ತಿಳಿಸಿದರು.







