ಲಾಕ್ಡೌನ್ ಅವಧಿಯಲ್ಲಿ ಜನರ ಮೇಲೆ ಪೊಲೀಸರ ಹಲ್ಲೆ ನಾಗರಿಕ ಹಕ್ಕುಗಳ ಉಲ್ಲಂಘನೆ: ಪಿಯುಸಿಎಲ್
ಬೆಂಗಳೂರು, ಮೇ 14: `ಕೋವಿಡ್ ನಿಯಂತ್ರಣಕ್ಕೆ ಸರಕಾರ ಹೇರಿದ್ದ ಲಾಕ್‍ಡೌನ್ ಅವಧಿಯಲ್ಲಿ ಜನಸಾಮಾನ್ಯರ ಮೇಲೆ ಪೊಲೀಸರು `ಲಾಠಿ'ಯಿಂದ ಹಲ್ಲೆ, ವಾಹನ ಸೀಜ್ ಮಾಡದಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಇದು ನಿಲ್ಲಿಸಬೇಕು. ಇದು ಜನರ ಮೇಲೆ ದೌರ್ಜನ್ಯ ಮಾತ್ರವಲ್ಲ, ನಾಗರಿಕ ಹಕ್ಕುಗಳ ಉಲ್ಲಂಘನೆ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆ ಎಂದು ಪಿಯುಸಿಎಲ್ ಶಾಖೆ ಖಂಡಿಸಿದೆ.
''ಸರಕಾರ ಸೂಕ್ತ ಸಮಯದಲ್ಲಿ ಸೂಕ್ತ ರೀತಿಯಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಮತ್ತು ಸುಸ್ಥಿರತೆಯ ಬಗ್ಗೆ ಗಮನವಹಿಸದೆ ಪೂರ್ವ ಸಿದ್ಧತೆ ಮಾಡಿಕೊಳ್ಳದೆ ಕೋವಿಡ್-19 ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ತರಾತುರಿಯಲ್ಲಿ ಲಾಕ್‍ಡೌನ್ ಜಾರಿ ಮಾಡಿ ಸಾರ್ವಜನಿಕರ ಬದುಕನ್ನು ಅತಂತ್ರ ಪರಿಸ್ಥಿತಿಗೆ ದೂಡಿದೆ. ಆಸ್ಪತ್ರೆಗಳಲ್ಲಿ ಬೆಡ್ ಮತ್ತು ಆಕ್ಸಿಜನ್ ಕೊರತೆ, ರೋಗಿಗಳಿಗೆ ಸೂಕ್ತ ಚಿಕಿತ್ಸೆಯ ಕೊರತೆ ಸೇರಿದಂತೆ ಕೋವಿಡ್ ಹೊರತು ಪಡಿಸಿ ಇತರೆ ಖಾಯಿಲೆಗಳಿಗೆ ಚಿಕಿತ್ಸೆ ದೊರಕದಿರುವುದು ಸ್ಪಷ್ಟವಾಗಿ ಕಂಡುಬರುತ್ತಿದ್ದು ಸಾವಿನ ಪ್ರಮಾಣ ಪ್ರತಿದಿನ 400 ರಿಂದ 500 ಗಡಿದಾಟಿ ಹೆಚ್ಚಾಗುತ್ತಲೇ ಮುಂದುವರಿಯುತ್ತಿದೆ''
ಉಚಿತ ಲಸಿಕೆ ನೀಡುವುದಾಗಿ ಘೋಷಿಸಿರುವ ರಾಜ್ಯ-ಕೇಂದ್ರ ಸರಕಾರಗಳು ಅದರ ಅಭಾವದ ಬಗ್ಗೆ ಜನರಿಗೆ ಸರಿಯಾಗಿ ಮನವರಿಕೆ ಮಾಡಿಕೊಡಬೇಕು. ಮೊದಲ ಡೋಸ್ ಪಡೆದವರು ಎರಡನೇ ಡೋಸ್ ನಿರೀಕ್ಷೆಯಲ್ಲಿದ್ದಾರೆ, ಆದರೆ, ರಾಜ್ಯ ಸರಕಾರವು ಕೇಂದ್ರಕ್ಕೆ ಕೋರಿರುವ ಲಸಿಕೆಯ ನೆರವು ಇನ್ನೂ ಒದಗಿಸಿಲ್ಲದ ಕಾರಣ ಮೊದಲ ಲಸಿಕೆ ಪಡೆದರೂ ಆತಂಕಕ್ಕೊಳಗಾಗಿದ್ದಾರೆ. ಕೋವಿಡ್ ಲಸಿಕೆ ಪಡೆದವರಲ್ಲು ಸೋಂಕು ದೃಢಪಡುತ್ತಿರುವ ಬಗ್ಗೆ ಆತಂಕಕ್ಕಿಡಾಗುತ್ತಿರುವವರಿಗೆ ಧೈರ್ಯ ನೀಡಿ ಲಸಿಕೆ ಬಗ್ಗೆ ಜಾಗೃತಿ ನೀಡಬೇಕಿದೆ ಮತ್ತು ರೋಗದ ಉಲ್ಬಣ ತಡೆಯಲು ಸಮುದಾಯದೊಟ್ಟಿಗೆ ನಿಂತು ಕೆಲಸ ಮಾಡಬೇಕಿರುವ ಜವಾಬ್ದಾರಿ ಆರೋಗ್ಯ ಇಲಾಖೆಯ ಮೇಲಿದೆ.
ಆದರೆ, ತಮ್ಮ ಎಲ್ಲ ಜವಾಬ್ದಾರಿಗಳನ್ನು ನಾಗರಿಕರ ಮೇಲೆ ಹಾಕಿ ಕೇವಲ ಮಾಸ್ಕ್ ಧರಿಸಿ ಮತ್ತು ಸ್ಯಾನಿಟೈಸರ್ ಬಳಸಿ ಎನ್ನುವುದಕ್ಕಷ್ಟೆ ಸೀಮಿತಗೊಳಿಸಿದೆ. ಎಲ್ಲರೂ ಮನೆಯಲ್ಲಿರಿ ಮತ್ತು ಸುರಕ್ಷಿತವಾಗಿರಿ ಎಂಬ ಘೋಷ ವಾಕ್ಯದೊಂದಿಗೆ ಸರಕಾರ ತನ್ನ ಎಲ್ಲಾ ಬಾರವನ್ನು ಜನರ ಮೇಲೆ ಕೂರಿಸಿರುವುದು ದುರ್ಬಲ ಆಡಳಿತಕ್ಕೆ ಮಾದರಿಯಾಗಿದೆ. ಆಹಾರದ ಅಭ್ರತೆಯನ್ನು ಸೃಷ್ಟಿ ಮಾಡಿರುವ ರಾಜ್ಯ ಸರಕಾರ ಪಿಡಿಎಸ್‍ನಲ್ಲಿ ನೀಡಲಾಗುತ್ತಿದ್ದ ಆಹಾರ ಧಾನ್ಯಗಳ ಪ್ರಮಾಣವನ್ನು 5ಕೆಜಿಯಿಂದ 2ಕೆಜಿಗೆ ಇಳಿಸಿದ್ದು ಬಡಜನ ಹಸಿವಿನಿಂದ ಸಾಯುವಂತ ತುರ್ತು ಬಿಕ್ಕಟ್ಟನ್ನು ರಾಜ್ಯ ಸರಕಾರವೇ ಸೃಷ್ಟಿಸಿದೆ.
ನಿರ್ಗತಿಕರು, ನಿರಾಶ್ರಿತರು, ಬಡಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರ ಮತ್ತು ಇತರೆ ವಂಚಿತ ಸಮುದಾಯಗಳ ಜೀವನೋಪಾಯದ ಮೇಲೆ ಈಗಾಗಲೇ ತನ್ನ ಅವೈಜ್ಞಾನಿಕ ಮಾರ್ಗಸೂಚಿಗಳ ಮೂಲಕ ಹಲ್ಲೆ ನಡೆಸಿದ್ದರಿಂದ ಜನರು ಸಾಕಷ್ಟು ಅಸಹಾಯಕರಾಗಿದ್ದಾರೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಮಾರ್ಗಸೂಚಿ ಉಲ್ಲಂಘನೆ ಮಾಡುವವರಿಗೆ ಕಾನೂನಿನ ಅಡಿಯಲ್ಲಿ ಸೂಕ್ತ ರೀತಿಯ ಕ್ರಮ ಜರುಗಿಸಬೇಕೆ ವಿನಃ ಲಾಠಿಚಾರ್ಜ್ ಮತ್ತು ಅವಾಚ್ಯ ಬೈಗುಳಗಳ ಮೂಲಕ ಹಲ್ಲೆಗೆ ಮುಂದಾಗಬಾರದು. ಹಾಗೆಯೇ ರಾಜ್ಯ ಸರಕಾರವು ಮತ್ತೊಮ್ಮೆ ಲಾಕ್ಡೌನ್ ಮಾರ್ಗಸೂಚಿಯನ್ನು ಅವಲೋಕಿಸಿ ಜನರ ಜೀವನೋಪಾಯಕ್ಕೆ ಅನುಗುಣವಾಗಿ ಮಾರ್ಪಾಟಿಸಬೇಕು ಎಂದು ಪಿಯುಸಿಎಲ್ ಕೋರಿದೆ.
ಪೊಲೀಸರಿಗೆ ಜನರನ್ನು ಹೊಡೆಯುವ ಅಧಿಕಾರ ಇಲ್ಲ ಎಂದು ತಿಳಿದಿದ್ದರು ಪೊಲೀಸರು ಸಾರ್ವಜನಿಕರ ಮೇಲೆ ಗೂಂಡಾಗಿರಿ ಮಾಡಿ ಕರ್ತವ್ಯ ಲೋಪವೆಸಗಿದ್ದಾರೆ. ಆ ಮೂಲಕ ತಮ್ಮ ನೈತಿಕ ಹೊಣೆಗಾರಿಕೆಯನ್ನು ಮರೆತಂತಾಗಿದೆ. ಸುಮಾರು 16 ಸಾವಿರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು 11 ಸಾವಿರ ಪ್ರಕರಣಗಳನ್ನು ದಾಖಲು ಮಾಡಿಕೊಂಡಿದ್ದಾರೆ. ಜನರನ್ನು ಹೊಡೆಯುವದರಿಂದ ಮತ್ತು ಅವರಲ್ಲಿ ಭಯವನ್ನು ತರಿಸುವುದರಿಂದ ಸೋಂಕು ನಿಯಂತ್ರಣಕ್ಕೆ ಬರುವುದಿಲ್ಲ ಎಂಬುದನ್ನು ಗೃಹ ಇಲಾಖೆ ಅರ್ಥೈಸಿಕೊಳ್ಳಬೇಕು. ಇದರ ವಿರುದ್ಧ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಸ್ವಂಪ್ರೇರಣೆಯಿಂದ ದೂರು ದಾಖಲಿಸಿಕೊಂಡಿದ್ದರು ಹಲ್ಲೆಗೊಳಗಾದವರಿಗೆ ನ್ಯಾಯ ಸಿಗುವುದೇ? ಎಂದು ಪಿಯುಸಿಎಲ್ ಜಿಲ್ಲಾಧ್ಯಕ್ಷ ಸುಜಾಯತ್ತುಲ್ಲಾ, ಪ್ರಧಾನ ಕಾರ್ಯದರ್ಶಿ ತೇಜಸ್ ಕುಮಾರ್ ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.







