ಮರವಂತೆ, ಮಡಿಕಲ್, ದೊಂಬೆಯಲ್ಲಿ ತೀವ್ರಗೊಂಡ ಕಡಲ್ಕೊರೆತ

ಕುಂದಾಪುರ, ಮೇ 14: ವಾಯುಭಾರ ಕುಸಿತದಿಂದ ಪಶ್ಚಿಮದ ಅರಬ್ಬಿ ಸಮುದ್ರದಲ್ಲಿ ಉಂಟಾದ ಚಂಡಮಾರುತದ ಪರಿಣಾಮ ಕಡಲು ಪ್ರಕ್ಷುಬ್ಧ ಗೊಳ್ಳಲಾರಂಭಿಸಿದ್ದು, ಇದರಿಂದ ಉಡುಪಿ ಜಿಲ್ಲೆಯ ಕುಂದಾಪುರ ಮತ್ತು ಬೈಂದೂರು ತಾಲೂಕುಗಳ ಹಲವು ತೀರ ಪ್ರದೇಶಗಳು ತೀವ್ರವಾದ ಕಡಲ್ಕೊರೆತಕ್ಕೆ ಸಿಲುಕಿವೆ.
ಕುಂದಾಪುರ ತಾಲೂಕಿನ ಮರವಂತೆ, ಉಪ್ಪುಂದ ಸಮೀಪದ ಮಡಿಕಲ್ ಹಾಗೂ ಪಡುವರಿ ಗ್ರಾಮದ ದೊಂಬೆಯಲ್ಲಿ ಸಮುದ್ರ ಕೊರೆತ ತೀವ್ರ ಗೊಂಡಿವೆ. ಒಂದು ವಾರದಿಂದ ಮಂದಗತಿಯಲ್ಲಿದ್ದ ಕೊರೆತ ನಿನ್ನೆಯಿಂದ ತೀವ್ರತೆಯನ್ನು ಪಡೆದುಕೊಂಡಿದೆ. ದೊಂಬೆಯಲ್ಲಿ ನಿರ್ಮಿಸಿದ ತಡೆಗೋಡೆಯ ಒಂದು ಭಾಗ ಅಲೆಗಳ ಅಬ್ಬರಕ್ಕೆ ಕೊಚ್ಚಿಕೊಂಡು ಹೋಗಿದೆ.
ಹವಾಮಾನ ವೈಫರಿತ್ಯದೊಂದಿಗೆ ಗಾಳಿಯೂ ವೇಗವಾಗಿ ಬೀಸುತ್ತಿರುವುದರಿಂದ ಕಡಲಿನಲ್ಲಿ ದೈತ್ಯ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಮರವಂತೆಯ ಕಡಲ ತೀರದ ಹತ್ತಾರು ತೆಂಗಿನ ಮರಗಳು, ಮೀನುಗಾರಿಕಾ ಶೆಡ್‌ಗಳು ಸಮುದ್ರ ಪಾಲಾಗಿದೆ. ಮೀನುಗಾರರ ಮನೆಗಳು ಸೇರಿದಂತೆ ಇನ್ನಷ್ಟು ಅಪಾಯ ದಂಚಿನಲ್ಲಿವೆ. ಅಲೆಗಳು ಕಾಂಕ್ರೀಟ್ ರಸ್ತೆಗೂ ಬಂದು ಅಪ್ಪಳಿಸುತ್ತಿವೆ. ಇದರಿಂದ ರಸ್ತೆಯೂ ಅಪಾಯದಂಚಿನಲ್ಲಿದೆ.
ಮರವಂತೆಯ ಮೀನುಗಾರಿಕಾ ಹೊರಬಂದರಿನ ತಡೆಗೋಡೆಯ ಉತ್ತರ ದಿಕ್ಕಿನ 500 ಮೀ. ಉದ್ದದ ತೀರಕ್ಕೆ ಅಪ್ಪಳಿಸುತ್ತಿರುವ ಅಲೆಗಳು ತೀರದುದ್ದಕ್ಕೂ ಇರುವ ತೆಂಗಿನಮರಗಳನ್ನು ಬುಡಸಮೇತ ಕೊಚ್ಚಿಕೊಂಡು ಕಡಲಿನ ಒಡಲು ಸೇರಿಸಿಕೊಳ್ಳುತ್ತಿವೆ.
ಮರವಂತೆಯ ಚಂದ್ರ ಖಾರ್ವಿ ಎಂಬವರ ಬೃಹತ್ ಮೀನುಗಾರಿಕಾ ಶೆಡ್ ಈಗಾಗಲೇ ಕೊಚ್ಚಿ ಹೋಗಿದೆ. ಯಕ್ಷೇಶ್ವರಿ, ಯಕ್ಷೇಶ್ವರಿ ಮಾತಾ ಅವರ ಮೀನುಗಾರಿಕಾ ಶೆಡ್‌ಗಳು, ಸುದರ್ಶನ ಖಾರ್ವಿ ಅವರಿಗೆ ಸೇರಿದ 6 ತೆಂಗಿನ ಮರ, ಕೆ.ಎಂ.ಕೃಷ್ಣ ಎಂಬವರ 3, ಉಮೇಶ ಖಾರ್ವಿ ಅವರ 4, ಎಂ.ಎಸ್. ಖಾರ್ವಿ ಅವರ 4 ತೆಂಗಿನ ಮರಗಳು ಈಗಾಗಲೇ ಸಮುದ್ರ ಪಾಲಾಗಿವೆ.
ಕಳೆದ ಎರಡು-ಮೂರು ದಿನಗಳಿಂದ ಇಲ್ಲಿನ ಪರಿಸರದ ಕಡಲತೀರದ 40ಕ್ಕೂ ಅಧಿಕ ತೆಂಗಿನ ಮರಗಳು ಈಗಾಗಲೇ ಸಮುದ್ರದ ಮಡಿಲು ಸೇರಿವೆ. ಒಟ್ಟಿನಲ್ಲಿ ಸಮುದ್ರ ತೀರಗಳಲ್ಲಿ ಕಟ್ಟಿರುವ ಶೆಡ್‌ಗಳು, ಅಲ್ಲಿನ ಮೀನುಗಾರಿಕಾ ಸಲಕರಣೆಗಳು, ತೆಂಗಿನ ಮರಗಳು ಸೇರಿದಂತೆ ಈಗಾಗಲೇ ಬಡ ಮೀನುಗಾರ ರಿಗೆ ಲಕ್ಷಾಂತರ ರೂ. ನಷ್ಟ ಸಂಭಸಿದೆ ಎಂದು ಅಂದಾಜಿಸಲಾಗಿದೆ.
ಪರಿಹಾರಕ್ಕೆ ಆಗ್ರಹ: ಮರವಂತೆಯಲ್ಲಿ ಕಡಲ್ಕೊರೆತದ ತಾತ್ಕಾಲಿಕ ತಡೆಗಾಗಿ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಅವರು ಈಗಾಗಲೇ ಮೀನುಗಾರಿಕಾ ಸಚಿವ ಅಂಗಾರ ಅವರೊಂದಿಗೆ ಮಾತನಾಡಿದ್ದಾರೆ.ಮರವಂತೆಯಲ್ಲಿ ಆಗಾಗ ಸಂಭಸುತ್ತಿರುವ ಕಡಲ್ಕೊರೆತ ತೀರದ ನಿವಾಸಿ ಗಳ ನಿದ್ದೆಗೆಡಿಸಿದೆ. ಇದಕ್ಕೊಂದು ಶಾಶ್ವತ ಪರಿಹಾರ ಬೇಕೆಂಬುದು ಅವರ ಬೇಡಿಕೆಯಾಗಿದ್ದು, ಸುಮಾರು 500 ಮೀ. ಉದ್ದದ ಶಾಶ್ವತ ತಡೆಗೋಡೆಯನ್ನು ನಿರ್ಮಿಸಬೇಕೆಂಬುದು ಅವರ ಬಹುಕಾಲದ ಬೇಡಿಕೆಯಾಗಿದೆ.









