ಬಡವರಿಗೆ ಆರ್ಥಿಕ ಸಹಾಯಕ್ಕೆ ಆಗ್ರಹಿಸಿ ಮೇ 15ರಂದು ಜನಾಗ್ರಹ ಆಂದೋಲನದಿಂದ ರಾಜ್ಯಾದ್ಯಂತ ಪ್ರತಿಭಟನೆ
ಬೆಂಗಳೂರು, ಮೇ 14: ಕೋವಿಡ್ ಎರಡನೆ ಅಲೆಯ ಲಾಕ್‍ಡೌನ್ ಪರಿಣಾಮವಾಗಿ ನಿರುದ್ಯೋಗಿಯಾಗಿರುವ ಶ್ರಮಿಕ ವರ್ಗದಜನರಿಗೆ ಮಾಸಿಕ 5 ಸಾವಿರ ರೂ.ಗಳ ಆರ್ಥಿಕ ನೆರವನ್ನು ನೀಡಬೇಕೆಂದು ಆಗ್ರಹಿಸಿ ಜನಾಗ್ರಹ ಆಂದೋಲನ ವತಿಯಿಂದ ನಾಳೆ( ಮೇ 15) ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಜನಾಗ್ರಹ ಪರವಾಗಿ ಪತ್ರಿಕಾ ಹೇಳಿಕೆ ನೀಡಿರುವ ಸಾಮಾಜಿಕ ಕಾರ್ಯಕರ್ತ ಕೆ.ಎಲ್.ಅಶೋಕ್, ಕೋವಿಡ್ ಎರಡನೆ ಅಲೆಯಿಂದಾಗಿ ರಾಜ್ಯದಲ್ಲಿ ಸಾವು-ನೋವುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸರಿಯಾದ ಆರೋಗ್ಯ ವ್ಯವಸ್ಥೆ ಇಲ್ಲದ ಪರಿಣಾಮ ಸಾವಿನ ಸಂಖ್ಯೆ ಹೆಚ್ಚಾಗಿದೆ. ಸಾರ್ವಜನಿರು ಹಾಗೂ ಜನಪರ ಸಂಘಟನೆಗಳ ಒತ್ತಾಯದ ನಡುವೆಯು ರಾಜ್ಯ ಸರಕಾರ ಸೋಂಕಿತರ ಜೀವವನ್ನು ಉಳಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಕೋವಿಡ್‍ನಿಂದ ಸಾವನ್ನಪ್ಪಿದ ಹಲವು ಸೋಂಕಿತರಿಗೆ ಸರಿಯಾದ ಸಮಯದಲ್ಲಿ ಆಮ್ಲಜನಕ ವ್ಯವಸ್ಥೆ ಮಾಡಿದ್ದರೆ ಉಳಿದು ಬಿಡುತ್ತಿದ್ದರು. ಒಂದು ಕಡೆ ಕೋವಿಡ್‍ನಿಂದ ಸಾವನ್ನಪ್ಪಿದರೆ, ಮತ್ತೊಂದೆಡೆ ರಾಜ್ಯದಲ್ಲಿ ಸರಿಯಾದ ಆರೋಗ್ಯ ವ್ಯವಸ್ಥೆಯಿಲ್ಲದೆ ಸಾವನ್ನಪ್ಪುತ್ತಿದ್ದಾರೆ. ಈ ಬಗ್ಗೆ ಸರಕಾರ ಎಚ್ಚೆತ್ತುಕೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.
ಕೋವಿಡ್ ಎರಡನೆ ಅಲೆಯ ಪರಿಣಾಮ ಊಹಿಸುವುದಕ್ಕೂ ಸಾಧ್ಯವಾಗದ ರೀತಿಯಲ್ಲಿ ಸಾವು-ನೋವುಗಳು ಸಂಭವಿಸುತ್ತಿವೆ. ರಾಜ್ಯ ಸರಕಾರದ ನಿರ್ಲಕ್ಷ್ಯ ಹೀಗೆಯೇ ಮುಂದುವರಿದರೆ ಕೋವಿಡ್ ಮೂರನೇ ಅಲೆ ಬರಲಿದ್ದು, ಮತ್ತಷ್ಟು ಸಮಸ್ಯೆಗಳು ಎದುರಾಗಲಿವೆ. ಹೀಗಾಗಿ ರಾಜ್ಯ ಸರಕಾರ ಸಮರೋಪಾಧಿಯಲ್ಲಿ ಆರೋಗ್ಯ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಆಗ್ರಹಿಸಿ ನಾಳೆ ರಾಜ್ಯಾದ್ಯಂತ ಕೋವಿಡ್ ಮಾರ್ಗಸೂಚಿ ಅನುಸಾರ ತಮ್ಮ ಮನೆಗಳಲ್ಲಿಯೇ ಪ್ರತಿಭಟನೆ ನಡೆಸಲಾಗುವುದೆಂದು ಅವರು ಹೇಳಿದ್ದಾರೆ.
ಜನಾಗ್ರಹ ಆಂದೋಲನ ಹಮ್ಮಿಕೊಂಡಿರುವ ಪ್ರತಿಭಟನೆಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ದೇವನೂರ ಮಹಾದೇವ, ಡಾ.ಕೆ.ಮರುಳಸಿದ್ದಪ್ಪ, ಬಿ.ಟಿ.ಲಲಿತಾ ನಾಯಕ್, ಸಸಿಕಾಂತ್ ಸೆಂದಿಲ್, ಮಾವಳ್ಳಿ ಶಂಕರ್, ಯಾಸಿನ್ ಮಲ್ಪೆ, ಸಿ.ಎಸ್.ದ್ವಾರಕಾನಾಥ್, ಬಡಗಲಪುರ ನಾಗೇಂದ್ರ, ಎಚ್.ಆರ್. ಬಸವರಾಜಪ್ಪ. ಎಸ್.ಬಾಲನ್ ಮತ್ತಿತರರು ಬೆಂಬಲಿಸಲಿದ್ದಾರೆಂದು ಅವರು ಮಾಹಿತಿ ನೀಡಿದ್ದಾರೆ.
ಹಕ್ಕೊತ್ತಾಯಗಳು
-ಕೊರೋನಾ ಕೇರ್ ಸೆಂಟರ್ ಮತ್ತು ಆಕ್ಸಿಜನ್ ಸಹಿತ ಬೆಡ್‍ಗಳ ಸಂಖ್ಯೆಯನ್ನು ತೀವ್ರಗತಿಯಲ್ಲಿ ಪ್ರತಿನಿತ್ಯ ಹೆಚ್ಚಿಸಬೇಕು.
-ವ್ಯಾಕ್ಸಿನ್‍ನ್ನು ಎಲ್ಲಾ ವಯಸ್ಕರರಿಗೂ ಉಚಿತವಾಗಿ ಮತ್ತು ತಕ್ಷಣದಲ್ಲಿ ನೀಡುವ ವ್ಯವಸ್ಥೆ ಮಾಡಬೇಕು.
-ಎಲ್ಲಾ ಬಿಪಿಎಲ್ ಕುಟುಂಬಗಳಿಗೂ ಸರಕಾರವೇ ಸಮಗ್ರ ಪಡಿತರ ಕಿಟ್‍ಅನ್ನು ಉಚಿತವಾಗಿ ವಿತರಿಸಬೇಕು.







