ಖಗೋಲ ಶಾಸ್ತ್ರಜ್ಞ ಪ್ರೊ. ಜಯಂತ್ ಆಚಾರ್ಯ ನಿಧನ

ಮಂಗಳೂರು, ಮೇ 14: ನಗರದ ಸಂತ ಆಗ್ನೆಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಖಗೋಲ ಶಾಸ್ತ್ರಜ್ಞ ಪ್ರೊ.ಜಯಂತ್ ಆಚಾರ್ಯ (67) ಹೃದಯಾಘಾತದಿಂದ ಗುರುವಾರ ನಗರದ ಕುಲಶೇಖರ ಸಮೀಪದ ಸರಿಪಳ್ಳದಲ್ಲಿರುವ ತನ್ನ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಪ್ರೊ.ಜಯಂತ್ ಆಚಾರ್ಯ ಸುಮಾರು ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ನಗರದ ಅನೇಕರಿಗೆ ಖಗೋಲ ಶಾಸ್ತ್ರದ ಅಭಿರುಚಿ ಹುಟ್ಟಿಸಿದ್ದರು. ಸೂರ್ಯಗ್ರಹಣ, ಚಂದ್ರಗ್ರಹಣ ಧೂಮಕೇತು ಇತ್ಯಾದಿ ಆಕಾಶದ ವಿಸ್ಮಯಗಳ ಬಗ್ಗೆ ವಿದ್ಯಾರ್ಥಿಗಳು ಹಾಗೂ ಆಸಕ್ತರಿಗೆ ಪರಿಚಯ ಮಾಡಿಸು ತ್ತಿದ್ದರು. ಮಂಗಳೂರು ಹವ್ಯಾಸಿ ಖಗೋಲ ವೀಕ್ಷಕರ ಸಂಘದ ಮೂಲಕ ಅನೇಕ ಚಟುವಟಿಕೆ ಮಾಡುತ್ತಾ ಕ್ರಿಯಾಶಿಲರಾಗಿದ್ದರು.
ಸಂಗೀತ, ಯಕ್ಷಗಾನ, ನಾಟಕ, ಚಾರಣ ಇತ್ಯಾದಿ ಆಸಕ್ತಿಗಳನ್ನು ಹೊಂದಿದ್ದವರು. ಸಂಡೆ ಸೈನ್ಸ್ ಸ್ಕೂಲ್‌ನಂತಹ ಚಟುವಟಿಕೆಗಳ ಮೂಲಕ ಮಕ್ಕಳಿಗೆ ನಿಜವಾದ ಅರ್ಥದಲ್ಲಿ ವಿಜ್ಞಾನ ಕಲಿಕೆ ಎಂಬ ಪ್ರಯೋಗವನ್ನು ಹಲವಾರು ವರ್ಷ ನಡೆಸಿಕೊಂಡು ಬಂದಿದ್ದರು. ಕಿರಿಯರ ಜೊತೆ ಸದಾ ಸ್ನೇಹಭಾವದಿಂದಿರುತ್ತಿದ್ದ ಅವರು ಸರಳ ಸಜ್ಜನಕ್ಕೆ ಹೆಸರಾಗಿದ್ದರು. ಪಡಿ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾಗಿ, ಒಂದು ಅವಧಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.





