ಮೇ17ರವರೆಗೆ ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ
ಮಂಗಳೂರು, ಮೇ 14:ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಹೊರಡಿಸಿ ರುವ ಮುನ್ಸೂಚನೆಯಂತೆ ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಕರ್ನಾಟಕ ಕರಾವಳಿ ಭಾಗದಲ್ಲಿ ಮೇ 17ರವರೆಗೆ ಅಧಿಕ ಮಳೆಯಾಗುವ ಸಾಧ್ಯತೆ ಇದೆ. ಹಾಗಾಗಿ ಈ ಅವಧಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ದ.ಕ.ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದುಕೊಂಡು ವಿಪತ್ತನ್ನು ನಿಭಾಯಿಸಲು ತಯಾರಿ ಮಾಡಿಕೊಳ್ಳ ಬೇಕು, ಸಾರ್ವಜನಿಕರು ಮತ್ತು ಮೀನುಗಾರರು ನದಿ, ಸಮುದ್ರಕ್ಕೆ ಇಳಿಯದೆ ಎಚ್ಚರದಿಂದಿರಲು ಹಾಗೂ ತಗ್ಗು ಪ್ರದೇಶಗಳಿಗೆ ಇಳಿಯದಂತೆ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಈ ಸಂದರ್ಭ ಮಕ್ಕಳು/ಸಾರ್ವಜನಿಕರು ಅಪಾಯಕಾರಿ ವಿದ್ಯುತ್ ಕಂಬ, ಕಟ್ಟಡ, ಮರಗಳ ಕೆಳಗೆ ನಿಲ್ಲದೆ ಸುರಕ್ಷಿತ ಸ್ಥಳಗಳನ್ನು ತಲುಪುವುದು ಸೂಕ್ತವಾಗಿದೆ. ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳ ತುರ್ತ ಸೇವೆಗೆ ಕಂಟ್ರೋಲ್ ರೂಂ ನಂ: 1077 ಅಥವಾ 9483908000ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿಯ ಪ್ರಕಟನೆ ತಿಳಿಸಿದೆ.





