ʼಸೆಗಣಿ ಥೆರಪಿʼಗಳಿಗೆ ಬಲಿಯಾಗಿ ಕಪ್ಪು ಶಿಲೀಂಧ್ರ ಸೋಂಕಿಗೆ ತುತ್ತಾಗದಿರಿ: ವೈದ್ಯರ ಎಚ್ಚರಿಕೆ

ಹೊಸದಿಲ್ಲಿ, ಮೇ 14: ಕೋವಿಡ್ ಸೋಂಕು ತಡೆಯಲು ಹಾಗೂ ಗುಣಮುಖರಾಗಲು ಸೆಗಣಿ ಥೆರಪಿ ಬಳಸಿದ ಜನರಲ್ಲಿ ಕಪ್ಪು ಶಿಲೀಂಧ್ರ ಸೋಂಕು ಕಂಡು ಬರುವ ಸಾಧ್ಯತೆ ಇದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ಕೊರೋನ ಸೋಂಕಿನಿಂದ ಗುಣಮುಖರಾಗಲು ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಗುಜರಾತ್ನ ಕೆಲವು ಜನರು ಗೋಶಾಲೆಗಳಿಗೆ ವಾರಕ್ಕೊಮ್ಮೆ ಭೇಟಿ ನೀಡಿ ಮೈಗೆ ಸೆಗಣಿ ಹಾಗೂ ಗೋಮೂತ್ರ ಲೇಪಿಸಿಕೊಳ್ಳುತ್ತಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯ್ಟರ್ಸ್ ಮೇ 12ರ ವೀಡಿಯೊ ವರದಿ ವೈರಲ್ ಆದ ಬಳಿಕ ವೈದ್ಯರು ಈ ಎಚ್ಚರಿಕೆ ನೀಡಿದ್ದಾರೆ. ಗುಜರಾತ್ನಲ್ಲಿ ಮುಖ್ಯವಾಗಿ ಸಕ್ಕರೆ ಕಾಯಿಲೆ ಇರುವವರಲ್ಲಿ ಕಪ್ಪು ಶಿಲೀಂಧ್ರದ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರ, ದಿಲ್ಲಿ ಹರ್ಯಾಣ ಹಾಗೂ ಒಡಿಶಾದಲ್ಲಿ ಕೂಡ ಇಂತಹ ಪ್ರಕರಣಗಳು ಪತ್ತೆಯಾಗಿವೆ.
ಕೋವಿಡ್ ಕುರಿತು ಪ್ರಮಖ ಧ್ವನಿಯಾಗಿರುವ ಅಮೆರಿಕ ಮೂಲದ ಡಾ. ಫಾಹೀಮ್ ಯೂನುಸ್ ಮೇ 13ರಂದು ಟ್ವೀಟ್ ಮಾಡಿ, ಕೋವಿಡ್ ಸೋಂಕಿನಿಂದ ಗುಣಮುಖರಾಗಲು ಸೆಗಣಿ ಬಳಕೆಯಿಂದ ಮಾರಣಾಂತಿಕ ಕಪ್ಪು ಶಿಲೀಂಧ್ರದ ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ ಎಂದಿದ್ದಾರೆ. ‘‘ನನಗೆ ಇದನ್ನು ಸಾಬೀತುಪಡಿಸಲು ಸಾಧ್ಯವಿಲ್ಲ. ಆದರೆ, ಈ ಸಾಧ್ಯತೆ ಅತೀ ಹೆಚ್ಚಿದೆ’’ ಎಂದು ಟ್ವೀಟ್ ಮಾಡಿರುವ ಅವರು ಅಮೇರಿಕದ ಅತ್ಯುಚ್ಛ ಆರೋಗ್ಯ ಸಂಸ್ಥೆ ರೋಗ ನಿಯಂತ್ರಣ ಹಾಗೂ ತಡೆ ಕೇಂದ್ರದ ವೆಬ್ಸೈಟ್ನ ಪ್ರಾಣಿಗಳ ಸೆಗಣಿಯಲ್ಲಿ ಕಪ್ಪು ಶಿಲೀಂಧ್ರಗಳು ಇದೆ ಎಂದು ಉಲ್ಲೇಖಿಸಿದ ಲೇಖನವೊಂದರ ಲಿಂಕ್ ಅನ್ನು ಶೇರ್ ಮಾಡಿದ್ದಾರೆ.