ಅರ್ಹ ವ್ಯಕ್ತಿಗಳಿಗೆ ಆಹಾರ ವಿತರಿಸಲು ಸಂಘ ಸಂಸ್ಥೆಗಳಿಗೆ ದ.ಕ. ಜಿಲ್ಲಾಧಿಕಾರಿ ಸೂಚನೆ
ಮಂಗಳೂರು, ಮೇ 14: ಸಂಘ ಸಂಸ್ಥೆಗಳು ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಿ ಅವಶ್ಯವಿರುವ ನಿರಾಶ್ರಿತರು ಹಾಗೂ ವಲಸೆ ಕಾರ್ಮಿಕರಿಗೆ ಆಹಾರ ವಿತರಣೆ ಮಾಡಬೇಕು ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಸೂಚಿಸಿದ್ದಾರೆ.
ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ವೀಡಿಯೋ ಸಂವಾದದ ಮೂಲಕ ಶುಕ್ರವಾರ ಸಭೆ ನಡೆಸಿ ಅವರು ಮಾತನಾಡುತ್ತಿದ್ದರು.
ಕೊರೋನ-ಲಾಕ್‌ಡೌನ್ ಸಂದರ್ಭ ವಿವಿಧ ಸಂಘಟನೆಗಳು ಸ್ವಇಚ್ಛೆಯಿಂದ ಆಹಾರದ ಪೊಟ್ಟಣ ವಿತರಿಸುತ್ತಿದೆ. ಆದರೆ ಅದು ಅವಶ್ಯರುವ ಪ್ರತಿಯೊಬ್ಬ ವ್ಯಕ್ತಿಗೂ ತಲುಪಬೇಕು, ಯಾವ ಕಾರಣಕ್ಕೂ ಕೊಟ್ಟವರಿಗೆ ಮತ್ತೆ ಮತ್ತೆ ಕೊಡುವಂತಾಗಬಾರದು. ಇದರಿಂದ ಆಹಾರ ವ್ಯರ್ಥ ವಾಗಲಿದೆ. ನಿರಾಶ್ರಿತರು ಹೆಚ್ಚಾಗಿ ನಗರದ ನೆಹರೂ ಮೈದಾನ, ಬಂದರು ಸಮೀಪ ಕಂಡುಬಂದರೆ, ವಲಸೆ ಕಾರ್ಮಿಕರು ಸುರತ್ಕಲ್ ಭಾಗದಲ್ಲಿ ಕಾಣಲು ಸಿಗುತ್ತಾರೆ. ಇವರಿಗೆ ಆಹಾರ ವಿತರಣೆಯಲ್ಲಿ ವ್ಯಯವಾಗುವುದನ್ನು ತಪ್ಪಿಸಲು ಮೇ 16ರಿಂದ ಸಂಘ ಸಂಸ್ಥೆಗಳು ಯಾವ್ಯಾವ ಭಾಗದಲ್ಲಿ ನೀಡಬೇಕು ಎಂಬುದರ ಬಗ್ಗೆ ಜಿಲ್ಲಾಡಳಿದೊಂದಿಗೆ ಸಮನ್ವಯ ಸಾಧಿಸುವುದು ಅನಿವಾರ್ಯವಾಗಿದೆ ಎಂದು ಡಿಸಿ ಹೇಳಿದರು.
ವೀಡಿಯೊ ಸಂವಾದದಲ್ಲಿ ಮಂಗಳೂರು ಉಪವಿಭಾಗಾಧಿಕಾರಿ ಮದನ್ ಮೋಹನ್, ಮಹಾನಗರ ಪಾಲಿಕೆ ಅಧಿಕಾರಿಗಳು, ಕಾರ್ಮಿಕ ಇಲಾಖೆ ಅಧಿಕಾರಿ, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.





