ಕೋವಿಡ್ ರೋಗಿಗಳ ಆ್ಯಂಬುಲೆನ್ಸ್ ಗಳನ್ನು ಗಡಿಗಳಲ್ಲಿ ತಡೆಯದಂತೆ ತೆಲಂಗಾಣಕ್ಕೆ ಹೈಕೋರ್ಟ್ ಆದೇಶ

ಹೈದರಾಬಾದ್,ಮೇ 14: ಕೋವಿಡ್-19 ರೋಗಿಗಳನ್ನು ಹೊತ್ತಆ್ಯಂಬುಲೆನ್ಸ್ ಗಳು ಚಿಕಿತ್ಸೆಗಾಗಿ ರಾಜ್ಯವನ್ನು ಪ್ರವೇಶಿಸುವುದನ್ನು ತಡೆಯದಂತೆ ತೆಲಂಗಾಣ ಉಚ್ಚ ನ್ಯಾಯಾಲಯವು ಶುಕ್ರವಾರ ತೆಲಂಗಾಣ ಸರಕಾರಕ್ಕೆ ಆದೇಶ ನೀಡಿದೆ.
ರಾಜ್ಯದ ಗಡಿಗಳಲ್ಲಿ ಆ್ಯಂಬುನ್ಸ್ ಗಳನ್ನು ತಡೆಯುತ್ತಿರುವ ಪೊಲೀಸರಿಗೆ ತನ್ನ ಆದೇಶವನ್ನು ತಕ್ಷಣ ತಲುಪಿಸುವಂತೆ ಉಚ್ಚ ನ್ಯಾಯಾಲಯವು ಸೂಚಿಸಿತು. ಈ ಸಂಬಂಧ ಸಲ್ಲಿಸಲಾಗಿದ್ದ ಸಾರ್ವಜನಿಕ ಅರ್ಜಿಯ ವಿಚಾರಣೆಯನ್ನು ನಡೆಸಿದ ಮುಖ್ಯ ನ್ಯಾಯಾಧೀಶೆ ಹಿಮಾ ಕೊಹ್ಲಿ ಮತ್ತು ನ್ಯಾ.ಬಿ.ವಿಜಯಸೇನ ರೆಡ್ಡಿ ಅವರ ಪೀಠವು ಈ ಆದೇಶವನ್ನು ಹೊರಡಿಸಿತು.
ಶುಕ್ರವಾರ ಕರ್ನೂಲಿನ ಪಂಚಲಿಂಗಲ ತನಿಖಾ ಠಾಣೆಯ ಪೊಲೀಸರು ಆ್ಯಂಬುಲನ್ಸ್ ತೆಲಂಗಾಣವನ್ನು ಪ್ರವೇಶಿಸಲು ಅನುಮತಿ ನಿರಾಕರಿಸಿದ್ದರಿಂದ ಇಬ್ಬರು ಕೋವಿಡ್-19 ರೋಗಿಗಳು ಮೃತಪಟ್ಟಿದ್ದಾರೆ.
ಇತರ ರಾಜ್ಯಗಳಿಂದ ಕೋವಿಡ್-19 ರೋಗಿಗಳನ್ನು ಚಿಕಿತ್ಸೆಗಾಗಿ ಹೈದರಾಬಾದಿಗೆ ಕರೆತರುವ ಬಗ್ಗೆ ತೆಲಂಗಾಣ ಸರಕಾರವು ಇತ್ತೀಚಿಗೆ ಹೊರಡಿಸಿರುವ ಮಾರ್ಗಸೂಚಿಗಳನ್ನು ಅರ್ಜಿದಾರರು ಪ್ರಶ್ನಿಸಿದ್ದರು. ರಾಜ್ಯ ಸರಕಾರಕ್ಕೆ ನೋಟಿಸನ್ನು ಹೊರಡಿಸಿರುವ ಉಚ್ಚ ನ್ಯಾಯಾಲಯವು ಎರಡು ವಾರಗಳಲ್ಲಿ ಕೌಂಟರ್ ಅಫಿಡವಿಟ್ ಸಲ್ಲಿಸುವಂತೆ ನಿರ್ದೇಶ ನೀಡಿದೆ.
ನೆರೆರಾಜ್ಯಗಳಿಂದ ಬರುವ ಆ್ಯಂಬುಲನ್ಸ್ಗಳನ್ನು ತಡೆಯದಂತೆ ತೆಲಂಗಾಣ ಸರಕಾರಕ್ಕೆ ನಿರ್ದೇಶ ನೀಡಿದ ಉಚ್ಚ ನ್ಯಾಯಾಲಯವು,ಕೋವಿಡ್-19 ರೋಗಿಗಳಿರುವ ಆ್ಯಂಬುಲನ್ಸ್ಗಳ ಅಂತರರಾಜ್ಯ ಸಂಚಾರವನ್ನು ತಡೆಯಲು ಹೊಸ ಮಾರ್ಗಸೂಚಿಗಳನ್ನು ಹೊರಡಿಸುವ ಯಾವುದೇ ಬಳಸುದಾರಿಯನ್ನು ಹಿಡಿಯದಂತೆ ಸ್ಪಷ್ಟಪಡಿಸಿದೆ.





