ರೆಮ್ಡೆಸಿವಿರ್ ಕಾಳಸಂತೆಯಲ್ಲಿ ಮಾರಾಟ ತಡೆಯಲು ಎಸ್ಪಿ ನೇತೃತ್ವದಲ್ಲಿ ತಂಡ: ಶಿವಮೊಗ್ಗ ಡಿಸಿ ಶಿವಕುಮಾರ್

ಶಿವಮೊಗ್ಗ, ಮೇ 15: ರೆಮ್‍ಡೆಸಿವಿರ್ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಯಲು ಎಸ್ಪಿ ಅವರ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದ್ದು, ಅಂತಹ ಪ್ರಕರಣಗಳಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಅವರು ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರಸಕ್ತ ಸರ್ಕಾರಿ ಆಸ್ಪತ್ರೆಯಲ್ಲಿ 172 ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 306 ರೆಮ್‍ಡೆಸಿವಿರ್ ಇಂಜೆಕ್ಷನ್ ಲಭ್ಯವಿದೆ. ಸದರಿ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟವಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಕಾಳಸಂತೆಯಲ್ಲಿ ಮಾರಾಟ ಪತ್ತೆ ಹಚ್ಚಲು ಸ್ಟಿಂಗ್ ಆಪರೇಷನ್ ಸಹ ನಡೆಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಇದು ಸಮಾಧಾನವೇ ಹೊರತು ತೃಪ್ತಿತಂದಿಲ್ಲ. ಕಳೆದ ವಾರಕ್ಕೆ ಹೋಲಿಸಿದರೆ ಈ ಎರಡು ಮೂರು ದಿನಗಳಿಂದ 1 ಸಾವಿರ ದಾಟುತ್ತಿದ್ದ ಕೊರೋನ ಸೋಂಕಿತರ ಸಂಖ್ಯೆ 1 ಸಾವಿರದ ಒಳಗೆ ಬರುತ್ತಿದೆ. ಇದು ಕೊಂಚ ಸಮಾಧಾನವಾದರೂ ತೃಪ್ತಿಯಂತೂ ಇಲ್ಲ. ಶೇ.45 ರಿಂದ 47ರಷ್ಟು ಇದ್ದ ಸೋಂಕಿತರ ಪ್ರಮಾಣ ಶೇ.37 ರಷ್ಟು ಬಂದಿದೆ. ಈ ಶೇ.37 ರಷ್ಟು ಇದ್ದರೂ ಕೂಡ ಸ್ವಲ್ಪ ಹೆಚ್ಚಾಗಿದೆ ಎಂದರು.
ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ. ರೋಗಿಗಳ ದಾಖಲಾತಿ ಹಾಗೂ ಅವರ ಆರೋಗ್ಯ ಸ್ಥಿತಿ ನೋಡಿಕೊಂಡು ಬೆಡ್ ಹಂಚಿಕೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಈಗ 72 ಆಕ್ಸಿಜನ್ ಬೆಡ್ ಖಾಲಿ ಇವೆ ಎಂದ ಅವರು, ಸಿಬ್ಬಂದಿ ಕೊರತೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 7277 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಮೆಗ್ಗಾನ್ ಆಸ್ಪತ್ರೆಯಲ್ಲಿ 600, ತಾಲೂಕು ಆಸ್ಪತ್ರೆಗಳಲ್ಲಿ 356, ಕೋವಿಡ್ ಸೆಂಟರ್‌ನಲ್ಲಿ 325 ಸೋಂಕಿತರಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ 508 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯಲ್ಲಿ 4,835 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಂಕಿ ಅಂಶ ನೀಡಿದರು.
ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಐಸೋಲೇಷನ್ ಟೀಂ ಮೂಲಕ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ದೂರವಾಣಿ ಮೂಲಕವೇ ವಿಚಾರಿಸಲಾಗುತ್ತಿದೆ. ಅಲ್ಲದೇ, ಖಾಸಗಿಯಾಗಿ ವೈದ್ಯರು ಮನೆಗಳಿಗೂ ಭೇಟಿ ನೀಡುತ್ತಿದ್ದಾರೆ ಎಂದರು.
ಕಳೆದ ಕೆಲವು ದಿನಗಳಿಗೆ ಹೋಲಿಸಿದರೆ ಸಾವಿನ ಸಂಖ್ಯೆ ಕೂಡ ಕಡಿಮೆಯಾಗಿದೆ. ನಿನ್ನೆಯ ಅಂಕಿ ಅಂಶದ ಪ್ರಕಾರ, 5 ಮಂದಿ ಸೋಂಕಿತರು ಮೃತಪಟ್ಟಿದ್ದು, ಇದುವರೆಗೂ 557 ಸೋಂಕಿತರು ಮರಣ ಹೊಂದಿದ್ದಾರೆ. ಜಿಲ್ಲಾಡಳಿತ ಅಗತ್ಯ ಎಚ್ಚರಿಕೆ ಕ್ರಮ ಅನುಸರಿಸುತ್ತಿದೆ ಎಂದರು.
ಸರ್ಕಾರಿ ಆಸ್ಪತ್ರೆಯಲ್ಲಿ 122, ಖಾಸಗಿ ಆಸ್ಪತ್ರೆಗಳಲ್ಲಿ 306 ರೆಮ್‌ಡೆಸಿವಿರ್ ಇದೆ. ತಾಲೂಕು ಆಸ್ಪತ್ರೆಗಳಲ್ಲಿ 104 ವೆಂಟಿಲೇಟರ್‌ಗಳಿವೆ. ಶಿರಾಳಕೊಪ್ಪ, ಸಾಗರ ಮತ್ತು ಹೊಸನಗರದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ ಎಂದರು.







