2021-22ನೇ ಶೈಕ್ಷಣಿಕ ವರ್ಷದ ವೇಳಾಪಟ್ಟಿ ಶೀಘ್ರ ಪ್ರಕಟಿಸಲು ಡಾ.ನಿರಂಜನಾರಾಧ್ಯ ಒತ್ತಾಯ

ಬೆಂಗಳೂರು, ಮೇ 15: ಶಿಕ್ಷಣ ಇಲಾಖೆ 2021-22ನೇ ಸಾಲಿನ ಶೈಕ್ಷಣಿಕ ವರ್ಷದ ವೇಳಾಪಟ್ಟಿ ಹಾಗೂ ನಮ್ಯ ಯೋಜನೆಯನ್ನು ಶೀಘ್ರವೇ ಪ್ರಕಟಿಸಬೇಕೆಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೋವಿಡ್ 19 ರ ಪರಿಣಾಮ 2020-21 ನೇ ಸಾಲಿನ ಶೈಕ್ಷಣಿಕ ವರ್ಷವು ಪೂರ್ಣವಾಗಿ ಹಳಿತಪ್ಪಿ ಮಕ್ಕಳ ಶಿಕ್ಷಣದ ಮೇಲೆ ಗಾಢ ಪರಿಣಾಮ ಬೀರಿತು. ಸರಕಾರಿ ಶಾಲೆಗಳಲ್ಲಿ ಆಗೊಮ್ಮೆ ಈಗೊಮ್ಮೆ ತರಗತಿಗಳು ನಡೆದದ್ದು ಮತ್ತು ಹಲವು ಗೊಂದಲಗಳ ನಡುವೆ ಸರಕಾರೇತರ ಶಾಲೆಗಳಲ್ಲಿ ಆನ್ ಲೈನ್ ತರಗತಿಯ ಮೂಲಕ ಅಲ್ಪ ಪ್ರಮಾಣದ ಕಲಿಕಾ ಚಟುವಟಿಕೆಗಳನ್ನು ಹೊರತು ಪಡಿಸಿದರೆ, 2020-21 ನೇ ಸಾಲಿನಲ್ಲಿ ನಾವು ಮಕ್ಕಳಿಗೆ ವ್ಯವಸ್ಥಿತ ಹಾಗು ಅರ್ಥಪೂರ್ಣ ಕಲಿಕಾ ವ್ಯವಸ್ಥೆಯನ್ನು ಕಟ್ಟಿಕೊಡಲು ಸಾಧ್ಯವಾಗಲಿಲ್ಲವೆಂದು ವಿಷಾಧಿಸಿದ್ದಾರೆ.
2020-21 ನೇ ಶೈಕ್ಷಣಿಕ ವರ್ಷವನ್ನು ಕಳೆದುಕೊಂಡಿರುವ ಪಾಲಕರು, ಮಕ್ಕಳು ಹಾಗು ಶಿಕ್ಷಕರಿಗೆ 2021-22ನೇ ಶೈಕ್ಷಣಿಕ ವರ್ಷದ ಬಗ್ಗೆ ಒಂದು ನಿಖರತೆ ಮತ್ತು ಸ್ಥೂಲ ಚಿತ್ರಣ ನೀಡುವ ಜವಾಬ್ದಾರಿ ಶಿಕ್ಷಣ ಇಲಾಖೆ ಮತ್ತು ಅದನ್ನು ಮನ್ನೆಡೆಸುವ ಶಿಕ್ಷಣ ಸಚಿವರ ಜವಾಬ್ದಾರಿಯಾಗಿದೆ. ಇಂದಿನ ಪರಿಸ್ಥಿತಿ ಮಕ್ಕಳು ಮತ್ತು ಪಾಲಕರಲ್ಲಿ ಹಲವು ಗೊಂದಲಗಳನ್ನು ಸೃಷ್ಟಿಸಿದೆ ಎಂದು ಅವರು ತಿಳಿಸಿದ್ದಾರೆ.
ಶಿಕ್ಷಣ ಇಲಾಖೆಯು ಎ.20, 2021ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಸರಕಾರವು 2021-22ನೇ ಸಾಲಿನಲ್ಲಿ ಪ್ರಾಥಮಿಕ ಶಾಲೆಗಳು ಜೂ.15 ರಿಂದ ಹಾಗು ಪ್ರೌಢ ಶಾಲೆಗಳು ಜು.15ರಿಂದ ಪ್ರಾರಂಭವಾಗುತ್ತವೆ ಎಂದು ಸೂಚಿಸಿತ್ತು. ಶಿಕ್ಷಣ ಕಾಯಿದೆ 2009 ರ ಅನ್ವಯ ರಾಜ್ಯದ ಎಲ್ಲಾ ಶಾಲೆಗಳು ಆಡಳಿತಾತ್ಮಕ ಮತ್ತು ಶೈಕ್ಷಣಿಕ ದೃಷ್ಟಿಯಿಂದ ರಾಜ್ಯ ಸರಕಾರದ ವ್ಯಾಪ್ತಿಗೆ ಬರುತ್ತವೆ. ಹೀಗಿದ್ದಾಗಿಯೂ ಸರಕಾರೇತರ ಶಾಲೆಗಳ ಆಡಳಿತ ಮಂಡಳಿಗಳು ಸರಕಾರದ ಸುತ್ತೋಲೆಯನ್ನು ಧಿಕ್ಕರಿಸಿ ತಮಗೆ ಮನ ಬಂದಂತೆ ಶಾಲೆಗಳನ್ನು ಮತ್ತು ಆನ್‍ಲೈನ್ ತರಗತಿಗಳನ್ನು ಪ್ರಾರಂಭಿಸುವುದಾಗಿ ಪತ್ರಿಕೆಗಳಲ್ಲಿ ಹೇಳಿಕೆ ನೀಡುತ್ತಿರುವುದು ಆತಂಕ ಮೂಡಿಸಿದೆ ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ 2021-22ನೇ ಶೈಕ್ಷಣಿಕ ವರ್ಷದ ಬಗ್ಗೆ ಒಂದು ನಿಖರತೆ ಮತ್ತು ಸ್ಥೂಲ ಚಿತ್ರಣ ನೀಡುವ ಖಚಿತ ಮಾಹಿತಿಯನ್ನು ಸರಕಾರ ನೀಡಬೇಕಿದೆ. ಜೊತೆಗೆ ಸರಕಾರಿ ಸುತ್ತೋಲೆ, ಆದೇಶಗಳನ್ನು ಪಾಲಿಸದೆ ಪಾಲಕರು ಮತ್ತು ಮಕ್ಕಳಲ್ಲಿ ಅನಗತ್ಯ ಗೊಂದಲ ಮೂಡಿಸುವ ಶಾಲೆಗಳ ಬಗ್ಗೆ ಕಠಿಣ ಕ್ರಮ ಜರುಗಿಸಬೇಕಿದೆ. ಈ ಅಂಶಗಳನ್ನು ಪರಿಶೀಲಿಸಿ ಶೈಕ್ಷಣಿಕ ವಲಯದಲ್ಲಿ ಉಂಟಾಗಿರುವ ಗೊಂದಲವನ್ನು ಸರಿಪಡಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
2021-22 ನೇ ಸಾಲಿನ ಶಿಕ್ಷಣ ಕಲಿಕೆಯ ಬಗ್ಗೆ ನಮ್ಮ ಆಯ್ಕೆಗಳು ಏನು ಎಂಬುದರ ಬಗ್ಗೆ ಶಿಕ್ಷಣ ಇಲಾಖೆಯ ಯೋಜನೆ-ಎ, ಯೋಜನೆ-ಬಿ, ಯೋಜನೆ-ಸಿ, ಶಿಕ್ಷಣ ಇಲಾಖೆ ಇವೆಲ್ಲವನ್ನು ಹೇಗೆ ನಿಭಾಯಿಸಲು ಬಯಸುತ್ತದೆ. ಇತ್ಯಾದಿಗಳ ಬಗ್ಗೆ ಸ್ಪಷ್ಟತೆ ಬೇಕಿದೆ. ಶಿಕ್ಷಣ ಇಲಾಖೆ ಈ ಬಗ್ಗೆ ಚರ್ಚಿಸಿ ಕೂಡಲೇ ಒಂದು ನಮ್ಯ ಯೋಜನೆಯನ್ನು ರೂಪಿಸಬೇಕೆಂದು ಅವರು ಮನವಿ ಮಾಡಿದ್ದಾರೆ.







