ಉಡುಪಿ: ಕೋವಿಡ್ಗೆ ಐವರು ಬಲಿ; 745 ಮಂದಿಗೆ ಕೊರೋನ ಪಾಸಿಟಿವ್
1197 ಮಂದಿ ಸೋಂಕಿನಿಂದ ಗುಣಮುಖ
ಉಡುಪಿ, ಮೇ 16: ಜಿಲ್ಲೆಯಲ್ಲಿ ಕೊರೋನ ಸೋಂಕಿಗೆ ರವಿವಾರ ಒಟ್ಟು ಐವರು ಬಲಿಯಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕೊರೋನಕ್ಕೆ ಬಲಿಯಾದವರ ಒಟ್ಟು ಸಂಖ್ಯೆ 266ಕ್ಕೇರಿದೆ. ದಿನದಲ್ಲಿ 745 ಮಂದಿ ಹೊಸದಾಗಿ ಸೋಂಕಿಗೆ ಪಾಸಿಟಿವ್ ಬಂದಿದ್ದಾರೆ. ಅಲ್ಲದೇ ಜಿಲ್ಲೆಯಲ್ಲಿ ಇಂದು 1197 ಮಂದಿ ಚಿಕಿತ್ಸೆಯ ಬಳಿಕ ಗುಣಮುಖರಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಇನನ್ನೂ 6805 ಮಂದಿ ಸೋಂಕಿಗೆ ಸಕ್ರಿಯರಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ರವಿವಾರ ಮೃತಪಟ್ಟ ಐದು ಮಂದಿಯಲ್ಲಿ ನಾಲ್ವರು (92, 91, 88, 45 ವರ್ಷ) ಮಹಿಳೆಯರು ಹಾಗೂ 75 ವರ್ಷ ಪ್ರಾಯದ ಓರ್ವ ಪುರುಷ ಸೇರಿದ್ದಾರೆ. ನಾಲ್ವರು ಕುಂದಾಪುರ ತಾಲೂಕಿನವರಾದರೆ, ಒಬ್ಬರು ಉಡುಪಿ ತಾಲೂಕಿನವರು.
ನಾಲ್ವರು ಕುಂದಾಪುರದ ಆಸ್ಪತ್ರೆಗಳಲ್ಲಿ ಒಬ್ಬರು ಉಡುಪಿಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರೆಲ್ಲರೂ ಹೆಮ್ಮಾಡಿ, ತ್ರಾಸಿ, ಕಾಳಾವರ, ಅಂಬಲಪಾಡಿ, ಕೆದೂರುದಂಥ ಗ್ರಾಮೀಣ ಭಾಗದಿಂದ ಬಂದವರು. ಇವರಲ್ಲಿ ಇಬ್ಬರು ಶನಿವಾರ ಮೃತಪಟ್ಟರೆ ಉಳಿದ ಮೂವರು ಇಂದು ಮೃತಪಟ್ಟರು ಎಂದು ಇಲಾಖೆಯ ಮಾಹಿತಿ ತಿಳಿಸಿದೆ. ಎಲ್ಲರೂ ಕೋವಿಡ್ ಗುಣಲಕ್ಷಣದೊಂದಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದರು.
ರವಿವಾರ ಪಾಸಿಟಿವ್ ಬಂದ 745 ಮಂದಿಯಲ್ಲಿ 417 ಮಂದಿ ಪುರುಷರು ಹಾಗೂ 328 ಮಂದಿ ಮಹಿಳೆಯರು. ಇವರಲ್ಲಿ ಉಡುಪಿ ತಾಲೂಕಿನ 316, ಕುಂದಾಪುರ ತಾಲೂಕಿನ 307 ಹಾಗೂ ಕಾರ್ಕಳ ತಾಲೂಕಿನ 113 ಮಂದಿ ಇದ್ದು, ಉಳಿದ 9 ಮಂದಿ ಹೊರಜಿಲ್ಲೆಗಳಿಂದ ಜಿಲ್ಲೆಗೆ ವಿವಿಧ ಕಾರಣಗಳಿಗಾಗಿ ಆಗವಿುಸಿದವರು.
ಶನಿವಾರ 1197 ಮಂದಿ ಸೋಂಕಿನಿಂದ ಗುಣಮುಖರಾಗುವ ಮೂಲಕ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 39,668ಕ್ಕೇರಿದೆ. ನಿನ್ನೆ ಜಿಲ್ಲೆಯ 2418 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಇಂದಿನ 745 ಮಂದಿ ಸೇರಿ ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 46,739 ಆಗಿದೆ ಎಂದು ಡಾ.ಸೂಡ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 5,47,807 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ. ರವಿವಾರ ಜಿಲ್ಲೆಯಲ್ಲಿ 45 ವರ್ಷ ಮೇಲಿನ ಒಟ್ಟು 82 ಮಂದಿ ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದುಕೊಂಡಿದ್ದಾರೆ ಎಂದು ಡಾ.ಸುಧೀರ್ ಚಂದ್ರ ಸೂಡ ತಿಳಿಸಿದರು.