ಕಪ್ಪು ಶಿಲೀಂದ್ರ ಸೋಂಕು ಯಾರಲ್ಲೂ ಕಂಡುಬಂದಿಲ್ಲ: ಸಿಇಓ ಡಾ.ನವೀನ್ ಭಟ್
ಉಡುಪಿ, ಮೇ 16: ಜಿಲ್ಲೆಯ ಯಾವುದೇ ಕೊರೋನ ಸೋಂಕಿತರಲ್ಲಿ ಇದುವರೆಗೆ ಕಪ್ಫು ಶೀಲೀಂದ್ರದ ಸೋಂಕು ಕಂಡುಬಂದಿಲ್ಲ ಎಂದು ವೈದ್ಯರೂ ಆಗಿರುವ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ವೈ ತಿಳಿಸಿದ್ದಾರೆ.
ತೌಕ್ತೆ ಚಂಡಮಾರುತ ಬಾಧಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರೊಂದಿಗೆ ಭೇಟಿ ನೀಡಿದ ವೇಳೆ ಅವರು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುತಿದ್ದರು. ಕಳೆದ 15 ದಿನಗಳಿಂದ ಕಪ್ಪು ಶಿಲೀಂದ್ರ ಕಾಟ ಕಾಣಿಸಿಕೊಂಡಿದ್ದು, ಮೊದಲು ಮಹಾರಾಷ್ಟ್ರ, ಗುಜರಾತ್ ಬಳಿಕ ಇದೀಗ ಬೆಂಗಳೂರಿನಲ್ಲೂ ಕಾಣಿಸಿಕೊಂಡ ವರದಿ ಇದ್ದು, ಉಡುಪಿ ಜಿಲ್ಲೆಯಲ್ಲಿ ಇನ್ನೂ ಇದು ವರದಿಯಾಗಿಲ್ಲ ಎಂದರು.
ಈ ಸೋಂಕಿಗಾಗಿ ಇಂಜೆಕ್ಷನ್ ಒಂದು ಲಭ್ಯವಿದ್ದು, ಅದನ್ನು ತರಿಸುವಂತೆ ಆರೋಗ್ಯ ಇಲಾಖೆಗೆ ತಿಳಿಸಲಾಗಿದೆ. ಇದಕ್ಕೂ ಬೇಕಾದ ಚಿಕಿತ್ಸೆ ನೀಡಲು ತಿಳಿಸಲಾಗಿದೆ. ಜಿಲ್ಲೆಯಲ್ಲಿ ಸತ್ತವರ ವಿವರಗಳನ್ನು ಪರಿಶೀಲಿಸಿದಾಗ, ಚಿಕಿತ್ಸೆಗೆ ಬಂದವರು 4-5ದಿನಗಳಲ್ಲೇ ಸಾವನ್ನಪ್ಪುತ್ತಿರುವುದು ಕಂಡುಬಂದಿದೆ. ಅವರು ಪರೀಕ್ಷೆಗೆ ಬರುವುದೇ ತಡವಾಗುತ್ತಿದೆ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದರು.
ಇನ್ನು ಮನೆಯಲ್ಲಿ ಹೋಮ್ ಐಸೋಲೇಷನ್‌ನಲ್ಲಿರುವವರು ಪ್ರತ್ಯೇಕ ವ್ಯವಸ್ಥೆ ಇಲ್ಲದಿದ್ದರೆ ನಮ್ಮ ಕೋವಿಡ್ ಕೇರ್ ಸೆಂಟರ್‌ಗೆ ಬಂದು ದಾಖಲಾದರೆ ಅವರಿಗೆ ಎಲ್ಲಾ ಚಿಕಿತ್ಸೆ ನೀಡಲಾಗುತ್ತದೆ ಎಂದು ಡಾ.ನವೀನ್ ಭಟ್ ಹೇಳಿದರು.
ಪಲ್ಸ್ ಆಕ್ಸಿ ಮೀಟರ್: ದೇಹದಲ್ಲಿ ಆಮ್ಲಜನಕ ಕಡಿಮೆಯಾಗಿ ನಮ್ಮಲ್ಲಿ ಯಾರೂ ಸತ್ತಿಲ್ಲ. ಈಗ ಹೋಮ್ ಐಸೋಲೇಷನ್‌ನಲ್ಲಿರುವವರಿಗೆ ಪಲ್ಸ್ ಆಕ್ಸಿ ಮೀಟರ್ ನೀಡಲು ಶಾಸಕರ ನೆರವು ಕೊರಲಾಗಿದೆ. ಅಲ್ಲದೇ ಗ್ರಾಪಂ ಮೂಲಕ ಪ್ರತಿ ಮನೆಯಲ್ಲಿರುವವರಿಗೆ ಆಕ್ಸಿ ಮೀಟರ್ ನೀಡಲು ಸೂಚಿಸಲಾಗಿದೆ ಎಂದರು.
ಮನೆಯಲ್ಲೇ ಚಿಕಿತ್ಸೆ ಪಡೆಯುವರು ಆಗಾಗ ಆಕ್ಸಿಜನ್ ಮಟ್ಟವನ್ನು ಪರೀಕ್ಷಿಸಿಕೊಂಡು ಅದು 94ಕ್ಕಿಂತ ಕಡಿಮೆ ಬಂದರೆ ಕೂಡಲೇ ಮಾಹಿತಿ ನೀಡಿ ಬೇಕಾದ ಚಿಕಿತ್ಸೆ ಪಡೆದುಕೊಳ್ಳಬಹುದು. ಇತ್ತೀಚೆಗೆ ಯುವಜನತೆ ಸಾಯುತ್ತಿ ರುವುದು ಕಂಡುಬಂದಿದ್ದು ಇದಕ್ಕೆ ಅವರು ಜ್ವರದಂಥ ಸಂದರ್ಭದಲ್ಲಿ ಮನೆಯಲ್ಲೇ ಸ್ವ ಚಿಕಿತ್ಸೆ ಪಡೆಯುತ್ತಿರುವುದು ಅಥವಾ ನರ್ಸಿಂಗ್‌ಹೋಮ್‌ಗಳಿಗೆ ಹೋಗಿ ಔಷಧಿ ಪಡೆದು ಸುಮ್ಮನಿರುವುದು ಕಾರಣವಾಗಿದೆ. ಕೊನೆಗೆ ವಿಷಮಿಸಿದಾಗ ಅವರು ಆಸ್ಪತ್ರೆಗಳಿಗೆ ಬಂದಾಗ ಪರಿಸ್ಥಿತಿ ಕೈಮೀರಿರುತ್ತದೆ ಎಂದರು.
ಆದುದರಿಂದ ಎಲ್ಲರೂ ಕೊರೋನ ಲಕ್ಷಣ ಕಂಡುಬಂದಾಕ್ಷಣ ಪರೀಕ್ಷೆ ಮಾಡಿಸಿಕೊಳ್ಳಬೇಕು. ಅಲ್ಲದೇ ನರ್ಸಿಂಗ್ ಹೋಮ್‌ಗಳೂ ಸಹ ಅಂಥವರನ್ನು ಆಸ್ಪತ್ರೆಗೆ ರೆಫರಲ್ ಮಾಡಬೇಕು ಎಂದು ಡಾ.ಭಟ್ ಸಲಹೆ ನೀಡಿದರು.
ಜಿಲ್ಲೆಯಲ್ಲಿ ಕಳೆದ 10 ದಿನಗಳಿಂದ ಪಾಸಿಟಿವಿಟಿ ಪ್ರಮಾಣ ಶೇ.33-34 ರಲ್ಲಿದ್ದು, ಅದನ್ನು ಕಡಿಮೆ ಮಾಡುವ ಪ್ರಯತ್ನ ಮಾಡುತಿದ್ದೇವೆ. ಇದಕ್ಕಾಗಿ ಹೆಚ್ಚಿನ ಪರೀಕ್ಷೆಗಳನ್ನು ನಿರಂತರವಾಗಿ ಮಾಡುತಿದ್ದೇವೆ. ಪ್ರತಿದಿನ 2500ರಿಂದ 3000 ಪರೀಕ್ಷೆಗಳಾಗುತ್ತಿವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ನುಡಿದರು.
ರೋಗ ಲಕ್ಷಣವಿರುವ ಜನರು ಮನೆಯಲ್ಲಿದ್ದು ತಾವೇ ಔಷಧ ತೆಗೆದುಕೊಳ್ಳದೇ, ಆಸ್ಪತ್ರೆಗೆ ಬಂದು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಅವರು ತಿಳಿಸಿದರು.







