ನಾರದ ಸ್ಟಿಂಗ್ ಆಪರೇಶನ್ ಪ್ರಕರಣ: ಟಿಎಂಸಿಯ ಇಬ್ಬರು ಸಚಿವರು, ಓರ್ವ ಶಾಸಕನ ಬಂಧಿಸಿದ ಸಿಬಿಐ
ಸಾಂದರ್ಭಿಕ ಚಿತ್ರ
ಕೋಲ್ಕತಾ: 2014ರಲ್ಲಿ ನಡೆದ ನಾರದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಇಬ್ಬರು ಮಂತ್ರಿಗಳು ಸೇರಿದಂತೆ ಹೊಸದಾಗಿ ಚುನಾಯಿತರಾದ ಮೂವರು ತೃಣಮೂಲ ಕಾಂಗ್ರೆಸ್ ಶಾಸಕರು ಹಾಗೂ ಮಾಜಿ ಟಿಎಂಸಿ ಸಚಿವ, ಕೋಲ್ಕತಾ ಮುನ್ಸಿಪಲ್ ಕಾರ್ಪೊರೇಷನ್ (ಕೆಎಂಸಿ) ಮೇಯರ್ ಅವರನ್ನು ಸೋಮವಾರ ಬಂಧಿಸಿದೆ. ನಾರದ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಸಿಬಿಐ ಸೋಮವಾರ ಚಾರ್ಜ್ ಶೀಟ್ ಸಲ್ಲಿಸಲಿದೆ.
ಹಿರಿಯ ರಾಜರಾರಿಣಿ ಪಂಚಾಯತ್ ಸಚಿವ ಸುಬ್ರತಾ ಮುಖರ್ಜಿ, ಕೆಎಂಸಿಯ ಆಡಳಿತಾಧಿಕಾರಿ, ಉತ್ತರ ಪರಗಣ ಜಿಲ್ಲೆಯ ಕಾಮರ್ಹತಿಯ ಟಿಎಂಸಿ ಶಾಸಕ, ನಗರ ಅಭಿವೃದ್ಧಿ ಹಾಗೂ ಸಾರಿಗೆ ಸಚಿವ ಫಿರ್ಹಾದ್ ಹಕೀಮ್, ಮದನ್ ಮಿತ್ರ ಹಾಗೂ ಮಾಜಿ ಟಿಎಂಸಿ ಸಚಿವ ಸೋವನ್ ಚಟರ್ಜಿ ಅವರನ್ನು ಬಂಧಿಸಲಾಗಿದೆ.
ತನ್ನ ನಿವಾಸದಿಂದ ಸಿಬಿಐ ಅಧಿಕಾರಿಗಳು ಕರೆದೊಯ್ಯುವಾಗ ಸುದ್ದಿಗಾರರೊಂದಿಗೆ ಮಾತನಾಡಿದ ಹಕೀಮ್, ನಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನನ್ನು ಬಂಧಿಸಲಾಗುತ್ತಿದೆ ಹಾಗೂ ಸಿಬಿಐ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡುತ್ತೇನೆ ಎಂದು ಹೇಳಿದ್ದಾರೆ.
"ಸಿಬಿಐ ಕಾರ್ಯವು ಬಿಜೆಪಿಯ ಪ್ರತೀಕಾರದ ರಾಜಕೀಯವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ. ಚುನಾವಣೆಯಲ್ಲಿ ಅವರು ಟಿಎಂಸಿಯೊಂದಿಗೆ ರಾಜಕೀಯವಾಗಿ ಹೋರಾಡಲು ವಿಫಲರಾಗಿದ್ದಾರೆ ಹಾಗೂ ಈಗ ಕೇಂದ್ರ ಏಜೆನ್ಸಿಯನ್ನು ಬಳಸುತ್ತಿದ್ದಾರೆ,’’ ಎಂದು ಟಿಎಂಸಿ ಸಂಸದ ಮತ್ತು ವಕ್ತಾರ ಸೌಗತಾ ರಾಯ್ ಹೇಳಿದ್ದಾರೆ.
ಮೂವರು ಶಾಸಕರನ್ನು ಬಂಧಿಸುವ ಮೊದಲು ಸಿಬಿಐ ವಿಧಾನಸಭೆಯ ಸ್ಪೀಕರ್ ಅನುಮತಿಯನ್ನು ತೆಗೆದುಕೊಳ್ಳಲಿಲ್ಲ ಎಂದು ಆಡಳಿತ ಪಕ್ಷ ಟಿಎಂಸಿ ಆರೋಪಿಸಿದೆ.