ಮುಲ್ಕಿ: ಸಸಿಹಿತ್ಲು ಮುಂಡಾ ಬೀಚ್ ಗೆ ಕಂದಾಯ ಸಚಿವರ ಭೇಟಿ, ಪರಿಶೀಲನೆ

ಮುಲ್ಕಿ: ಚಂಡಮಾರುತ ಎಫೆಕ್ಟ್ ನಿಂದ ನೀರುಪಾಲಾದ ಅಂತರಾಷ್ಟ್ರೀಯ ಸರ್ಫಿಂಗ್ ಖ್ಯಾತಿಯ ಸಸಿಹಿತ್ಲು ಮುಂಡಾ ಬೀಚ್ ಗೆ ಕಂದಾಯ ಸಚಿವ ಆರ್. ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ಸ್ಥಳೀಯರು ಸಸಿಹಿತ್ಲು ಸಿಆರ್ ಝೆಡ್ ವ್ಯಾಪ್ತಿಯಲ್ಲಿರುವ ಮೀನುಗಾರರ ಮನೆಗಳಿಗೆ ಹಕ್ಕುಪತ್ರ ನೀಡುವಂತೆ ಸಚಿವರಿಗೆ ಮನವಿ ಸಲ್ಲಿಸಿದರು. ಕೂಡಲೇ ಸಚಿವರು ಎಸಿ ಮದನ್ ಮೋಹನ್ ಜೊತೆ ಮಾತನಾಡಿ ಪರಿಶೀಲಿಸುವಂತೆ ಸೂಚನೆ ನೀಡಿದರು.
ಬಳಿಕ ಅವರು ಮಾಧ್ಯಮದೊಂದಿಗೆ ಮಾತನಾಡಿ ಚಂಡಮಾರುತ ಎಫೆಕ್ಟ್ ನಿಂದ ಸಸಿಹಿತ್ಲು ಅಂತರಾಷ್ಟ್ರೀಯ ಖ್ಯಾತಿಯ ಸರ್ಫಿಂಗ್ ಬೀಚ್ ಗೆ ಹಾನಿಯಾಗಿದ್ದು ತಡೆಗೋಡೆ ನಿರ್ಮಾಣ ಮಾಡುವಂತೆ ಹಾಗೂ ಅಧಿಕಾರಿಗಳಿಗೆ ಹಾನಿ ಬಗ್ಗೆ ಪರಿಶೀಲಿಸುವಂತೆ ಸೂಚನೆ ನೀಡಿದ್ದೇನೆ. ಹಾಗೂ ಸಮುದ್ರದ ಉಪ್ಪು ನೀರಿನಿಂದ ಎಕರೆಗಟ್ಟಲೆ ಕೃಷಿ ಹಾನಿ ಸಂಭವಿಸಿದ್ದು ಒಂದು ವಾರದಲ್ಲಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸಮೀಕ್ಷೆ ನಡೆಸಿ ಕೃಷಿಕರಿಗೆ ಪರಿಹಾರ ದೊರಕಿಸಿಕೊಡಲು ಪ್ರಯತ್ನಿಸಬೇಕು ಎಂದು ಸೂಚನೆ ನೀಡಿದರು.
ಚಂಡಮಾರುತದಿಂದ ಮನೆ ಕಳೆದುಕೊಂಡವರಿಗೆ 10ಲಕ್ಷ, ಮನೆ ಹಾನಿ ಯಾದವರಿಗೆ 1ಲಕ್ಷ,, ಮನೆಗೆ ನೀರು ನುಗ್ಗಿ ಹಾನಿಯಾದರೆ 10 ಸಾವಿರ ರೂ ಕೊಡಲಾಗುತ್ತೆ ಎಂದರು.
ಈ ಸಂದರ್ಭ ಕೃಷಿ ಹಾನಿ, ಹಾಗೂ ಮನೆ ಹಾನಿ ಬಗ್ಗೆ ಮಹಿಳೆಯರು ಕಂದಾಯ ಸಚಿವರಲ್ಲಿ ಮನವಿ ಸಲ್ಲಿಸಿದರು. ಸಚಿವರು ಬಳಿಕ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನಕ್ಕೆ ಹೊರಗಿನಿಂದಲೇ ಭೇಟಿ ನೀಡಿದ್ದು ಅವರನ್ನು ದೇವಳದ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಉಮಾನಾಥ ಕೋಟ್ಯಾನ್, ಮಂಡಲಾಧ್ಯಕ್ಷ ಸುನಿಲ್ ಆಳ್ವ,ಅಪರ ಜಿಲ್ಲಾಧಿಕಾರಿ ಪ್ರಜ್ಞ ಅಮ್ಮೆಂಬಳ, ಎಸಿ ಮದನ್ ಮೋಹನ್, ಮುಲ್ಕಿ ತಹಶಿಲ್ದಾರ್ ಕಮಲಮ್ಮ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.







