ಲ್ಯಾಬ್ ವರದಿಗೂ ಮುನ್ನ ಮೃತದೇಹ ಹಸ್ತಾಂತರಿಸಿ ಆಸ್ಪತ್ರೆ ಯಡವಟ್ಟು: ಆರೋಪ
►ಅಂತ್ಯಸಂಸ್ಕಾರದಲ್ಲಿ ಭಾಗಿಯಾದ 128 ಮಂದಿಗೆ ಕೊರೋನ ಪಾಸಿಟಿವ್ ►ಇಡೀ ಗ್ರಾಮವೇ ಸೀಲ್‍ಡೌನ್

ಚಿಕ್ಕಮಗಳೂರು, ಮೇ 17: ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಕೊರೋನ ಸೋಂಕಿಗೆ ಬಲಿಯಾದ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರದಲ್ಲಿ ಭಾಗಿಯಾದ 50ಕ್ಕೂ ಹೆಚ್ಚು ಗ್ರಾಮಸ್ಥರಲ್ಲಿ ಕೊರೋನ ಪಾಸಿಟಿವ್ ಪತ್ತೆಯಾಗಿರುವ ಬೆನ್ನಲ್ಲೇ ಸೋಮವಾರ ಮತ್ತೊಂದು ಗ್ರಾಮದಲ್ಲಿ ಅಂತ್ಯ ಸಂಸ್ಕಾರದಲ್ಲಿ ಭಾಗಿದ್ದ 128 ಮಂದಿಗೆ ಸೋಂಕು ಹರಡಿದ್ದು, ಸೋಂಕಿನ ಹಿನ್ನೆಲೆಯಲ್ಲಿ ಇಡೀ ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿದೆ.
ಚಿಕ್ಕಮಗಳೂರು ತಾಲೂಕಿನ ಇಂದಿರಾನಗರದ ನಿವಾಸಿಯೊಬ್ಬರು ಅನಾರೋಗ್ಯಕ್ಕೆ ತುತ್ತಾಗಿದ್ದರು. 2 ದಿನಗಳ ಚಿಕಿತ್ಸೆಯ ಬಳಿಕ ಈ ವ್ಯಕ್ತಿ ಮೃತಪಟ್ಟಿದ್ದರು. ಆಸ್ಪತ್ರೆಯ ಸಿಬ್ಬಂದಿ ಮೃತ ವ್ಯಕ್ತಿಯ ಸ್ವಾಬ್ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಆದರೆ ಪ್ರಯೋಗಾಲಯದ ವರದಿ ಬರುವುದಕ್ಕೂ ಮುನ್ನ ವ್ಯಕ್ತಿಯು ಬೇರೆ ಕಾಯಿಲೆಯಿಂದ ಮೃತಪಟ್ಟಿದ್ದಾರೆಂದು ತಿಳಿಸಿ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದರು ಎನ್ನಲಾಗಿದೆ.
ಮೃತ ವ್ಯಕ್ತಿಯ ಅಂತ್ಯಸಂಸ್ಕಾರ ನಡೆದ ಸಂದರ್ಭ ಇಂದಿರಾನಗರ ಗ್ರಾಮದ ನೂರಾರು ಮಂದಿ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದು, ಸಂಸ್ಕಾರದ ವಿಧಿ ಪೂರ್ಣಗೊಳಿಸಿ ಗ್ರಾಮಸ್ಥರು ಮನೆಗೆ ಹಿಂದಿರುಗಿದಾಗ ಗ್ರಾಮಸ್ಥರಿಗೆ ಅಚ್ಚರಿ ಕಾದಿತ್ತು. ಮೃತ ವ್ಯಕ್ತಿಯ ಪ್ರಯೋಗಾಲಯದ ಪರೀಕ್ಷೆಯಲ್ಲಿ ಪಾಸಿಟಿವ್ ಇರುವುದು ಪತ್ತೆಯಾಗಿತ್ತು. ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದ ಮಂದಿ ಭೀತಿಗೊಳಗಾಗಿ ಎಲ್ಲರೂ ಕೋವಿಡ್ ಪರೀಕ್ಷೆ ಮಾಡಿಸಿದ್ದು, ಪರೀಕ್ಷೆಗೊಳಗಾದವರ ಪೈಕಿ 128 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ.
128 ಮಂದಿಗೆ ಪಾಸಿಟಿವ್ ಇರುವುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇಡೀ ಗ್ರಾಮವನ್ನೇ ಸೀಲ್‍ಡೌನ್ ಮಾಡಲಾಗಿದೆ.
ಸೋಮವಾರ ಇಂದಿರಾನಗರ ಗ್ರಾಮಕ್ಕೆ ಕಂದಾಯ ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್, ತಹಶೀಲ್ದಾರ್ ಡಾ.ಕಾಂತರಾಜ್, ತಾಪಂ ಇಒ ತಾರಾನಾಥ್, ಪಿಡಿಒ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳ ತಂಡ ಭೇಟಿ ನೀಡಿ ಗ್ರಾಮಸ್ಥರು ಸರಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಿದ್ದಾರೆ.
ಸೋಂಕಿತರ ಕುಟುಂಬಗಳಿಗೆ ಪಡಿತರ ಸೇರಿದಂತೆ ಕೊರೋನ ಕಿಟ್‍ಗಳನ್ನು ಪೂರೈಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







