ಕೋವಿಡ್ ವಿರುದ್ಧ ಹೋರಾಡಲು ಸಿಎಂ ಪರಿಹಾರ ನಿಧಿಗೆ 50 ಲಕ್ಷ ರೂ. ದೇಣಿಗೆ ನೀಡಿದ ರಜಿನಿಕಾಂತ್

ಚೆನ್ನೈ(ತಮಿಳುನಾಡು), ಮೇ 17: ಸೂಪರ್ ಸ್ಟಾರ್ ರಜನಿಕಾಂತ್ ಸೋಮವಾರ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿಯಾಗಿದ್ದಾರೆ ಹಾಗೂ ರಾಜ್ಯ ಕೊರೋನ ಸಾಂಕ್ರಾಮಿಕ ರೋಗದ ಎರಡನೇ ಅಲೆ ವಿರುದ್ಧ ಹೋರಾಡುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಪರಿಹಾರ ನಿಧಿಗೆ 50 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಕೋವಿಡ್-19ರ ಹಿನ್ನೆಲೆಯಲ್ಲಿ ಸರಕಾರ ಜಾರಿಗೊಳಿಸಿದ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಕೂಡ ಅವರು ಜನರಲ್ಲಿ ಮನವಿ ಮಾಡಿದ್ದಾರೆ.
‘‘ಕೊರೋನ ನಿರ್ಮೂಲನೆ ಮಾಡಲು ನಾನು ತಮಿಳುನಾಡು ಮುಖ್ಯಮಂತ್ರಿ ಪರಿಹಾರ ನಿಧಿಗೆ 50 ಲಕ್ಷ ರೂಪಾಯಿ ದೇಣಿಗೆ ನೀಡಿದ್ದೇನೆ. ಕೊರೋನದಿಂದ ಹೊರಬರಲು ಸರಕಾರ ನೀಡಿದ ನಿಯಮ ಹಾಗೂ ನಿಬಂಧನೆಗಳನ್ನು ಪಾಲಿಸಬೇಕು’’ ಎಂದು ರಜನಿಕಾಂತ್ ಜನರಲ್ಲಿ ಮನವಿ ಮಾಡಿದ್ದಾರೆ.
ಕೋವಿಡ್-19 ಎರಡನೇ ಅಲೆಯ ವಿರುದ್ಧ ಹೋರಾಡಲು ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮನವಿ ಮಾಡಿದ ಬಳಿಕ ರಜನಿಕಾಂತ್ ಅವರು ಈ ದೇಣಿಗೆ ನೀಡಿದ್ದಾರೆ. ಕೊರೋನ ಸಾಂಕ್ರಾಮಿಕ ರೋಗ ನಿಯಂತ್ರಿಸಲು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ವಿಧಾನ ಸಭೆ ಸದಸ್ಯರನ್ನು ಒಳಗೊಂಡ 13 ಸದಸ್ಯರ ಶಾಸಕರ ಸಲಹಾ ಸಮಿತಿ ರೂಪಿಸಲಾಗಿದೆ ಎಂದು ತಮಿಳುನಾಡು ಸರಕಾರ ಕಳೆದ ರವಿವಾರ ಹೇಳಿತ್ತು.





