18-44 ವರ್ಷದವರಿಗೆ 3 ದಿನಕ್ಕಾಗುವಷ್ಟು ಮಾತ್ರ ಲಸಿಕೆ ಡೋಸ್ ಇದೆ: ದಿಲ್ಲಿ ಸರಕಾರ

ಹೊಸದಿಲ್ಲಿ, ಮೇ 17: 18ರಿಂದ 44 ವರ್ಷದವರಿಗೆ ಲಸಿಕಾಕರಣ ಮೂರು ದಿನಗಳಲ್ಲಿ ಸಂಪೂರ್ಣ ಸ್ಥಗಿತಗೊಳ್ಳಲಿದೆ ಎಂದು ದಿಲ್ಲಿ ಸರಕಾರ ಸೋಮವಾರ ಹೇಳಿದೆ. ಕೇವಲ ಮೂರು ದಿನಗಳಿಗೆ ಆಗುವಷ್ಟು ಮಾತ್ರ ಕೋವಿಶೀಲ್ಡ್ ಲಸಿಕೆ ಉಳಿದಿದೆ. ಈ ಪ್ರಾಯ ಗುಂಪಿಗೆ ಈ ತಿಂಗಳು ಇನ್ನಷ್ಟು ಲಸಿಕೆ ಪೂರೈಕೆ ಮಾಡಲು ಕೇಂದ್ರ ಸರಕಾರ ನಿರಾಕರಿಸಿದೆ ಎಂದು ದಿಲ್ಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಕೇಂದ್ರ ಸರಕಾರದಿಂದ ಸ್ವೀಕರಿಸಲಾದ ಪತ್ರವನ್ನು ಉಲ್ಲೇಖಿಸಿದ ಸಿಸೋಡಿಯಾ, ದಿಲ್ಲಿ ಸರಕಾರ 45ಕ್ಕಿಂತ ಮೇಲ್ಪಟ್ಟ ಪ್ರಾಯದವರಿಗೆ 3,83,000 ಡೋಸ್ಗಳನ್ನು ಮೇಯಲ್ಲಿ ಪಡೆಯಲಿದೆ. ಆದರೆ, 18ರಿಂದ 44 ಪ್ರಾಯದ ಒಳಗಿನವರಿಗೆ ಲಸಿಕೆಗಳು ಲಭ್ಯವಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
‘‘45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ನಾಲ್ಕು ದಿನಗಳ ಕಾಲ ಲಸಿಕೆ ಹಾಕುವಷ್ಟು ಡೋಸ್ನ ದಾಸ್ತಾನು ಮಾತ್ರ ಪಶಕ್ತ ನಮ್ಮಲ್ಲಿ ಇದೆ. 18ರಿಂದ 44 ಒಳಗಿನ ಪ್ರಾಯದವರಿಗೆ ಮೂರು ದಿನಗಳಿಗೆ ಆಗುವಷ್ಟು ಡೋಸ್ನ ದಾಸ್ತಾನು ಇದೆ’’ ಎಂದು ಸಿಸೋಡಿಯಾ ಹೇಳಿದ್ದಾರೆ.
ಇನ್ನಷ್ಟು ಡೋಸ್ ಲಸಿಕೆ ಪೂರೈಸುವಂತೆ ಕೇಂದ್ರ ಸರಕಾರಕ್ಕೆ ಮತ್ತೆ ಪತ್ರ ಬರೆಯಲಾಗುವುದು ಎಂದು ಸಿಸೋಡಿಯಾ ಅವರು ಹೇಳಿದ್ದಾರೆ.