ಕೊರೋನ ಚಿಕಿತ್ಸೆಗೆ ಡಿಆರ್ಡಿಒ ಅಭಿವೃದ್ಧಿಪಡಿಸಿದ ಔಷಧ 2ಡಿಜಿ ಬಿಡುಗಡೆ
ಹೊಸದಿಲ್ಲಿ, ಮೇ 17: ಕೊರೋನ ಸೋಂಕಿನ ಚಿಕಿತ್ಸೆಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ಡಿಒ) ಬಿಡುಗಡೆಗೊಳಿಸಿರುವ 2ಡಿಜಿ ಔಷಧದ ಮೊದಲ ಬ್ಯಾಚ್ ಅನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಆರೋಗ್ಯ ಸಚಿವ ಹರ್ಷವರ್ಧನ ಸೋಮವಾರ ಬಿಡುಗಡೆಗೊಳಿಸಿದರು.
ಕೊರೋನ ಸೋಂಕಿನ ವಿರುದ್ಧ ಹೋರಾಡಲು ದೇಶೀಯವಾಗಿ ಸಂಶೋಧನೆ ನಡೆಸಿ ಅಭಿವೃದ್ಧಿಗೊಳಿಸಿದ ಪ್ರಥಮ ಔಷಧ ಇದಾಗಿದೆ. 2ಡಿಜಿ ಔಷಧ ಚೇತರಿಸಿಕೊಳ್ಳುವ ಬೇಕಾಗುವ ಅವಧಿಯನ್ನು ಮತ್ತು ಆಮ್ಲಜನಕದ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ ಈ ಸಂದರ್ಭ ಹೇಳಿದರು.
ಡಿಆರ್ಡಿಒ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೊರೋನ ರೋಗಿಗಳ ಚಿಕಿತ್ಸೆಯಲ್ಲಿ ಹೊಸ ಭರವಸೆ ತುಂಬಿರುವ ಈ ಔಷಧ ದೇಶದ ಸಂಶೋಧನಾ ಸಾಮರ್ಥ್ಯದ ಪ್ರತೀಕವಾಗಿದೆ. ಈ ಔಷಧ ಸಾವಿರಾರು ಅಮೂಲ್ಯ ಜೀವಗಳನ್ನು ರಕ್ಷಿಸುವ ಜೊತೆಗೆ, ಕೊರೋನ ರೋಗಿಗಳು ಶೀಘ್ರ ಚೇತರಿಸಿಕೊಳ್ಳಲು ನೆರವಾಗುತ್ತದೆ. ಇದರಿಂದ ರೋಗಿಗಳು ಶೀಘ್ರ ಆಸ್ಪತ್ರೆಯಿಂದ ಬಿಡುಗಡೆಗೊಳ್ಳಲಿದ್ದಾರೆ ಎಂದರು.
ದೇಶದಲ್ಲಿ ಉಲ್ಬಣಗೊಂಡಿರುವ ಕೊರೋನ ಸೋಂಕಿನ ಮಾರಣಾಂತಿಕ 2ನೇ ಅಲೆಯ ವಿರುದ್ಧದ ಹೋರಾಟ ಮುಂದುವರಿದಿರುವ ಸಂದರ್ಭದಲ್ಲೇ 2-ಡಿಯಾಕ್ಸಿ-ಡಿ-ಗ್ಲುಕೋಸ್(2-ಡಿಜಿ) ಎಂಬ ಈ ಹೊಸ ಔಷಧಕ್ಕೆ ಅನುಮೋದನೆ ಲಭಿಸಿದೆ. ಬಾಯಿಯ ಮೂಲಕ ಸೇವಿಸುವ ಈ ಔಷಧವನ್ನು ಗಂಭೀರ ಸ್ಥಿತಿಯಲ್ಲಿರುವ ಕೊರೋನ ರೋಗಿಗಳ ಚಿಕಿತ್ಸೆಯಲ್ಲಿ ಪೂರಕ ಚಿಕಿತ್ಸೆಯಾಗಿ ಬಳಸಬಹುದು ಎಂದು ಇತ್ತೀಚೆಗೆ ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನಾಲಯ ಅನುಮೋದನೆ ನೀಡಿತ್ತು.
ಸಣ್ಣ ಪೊಟ್ಟಣದಲ್ಲಿ ಪೌಡರ್ ರೂಪದಲ್ಲಿ ಲಭಿಸುವ ಈ ಔಷಧವನ್ನು ನೀರಿನಲ್ಲಿ ಕಲಸಿ ಕುಡಿಯಬಹುದು. ಔಷಧ ಸೇವಿಸಿದವರು ಬೇಗನೆ ಚೇತರಿಸಿಕೊಂಡಿರುವುದು ಮತ್ತು ಇವರಿಗೆ ಆಮ್ಲಜನಕ ಒದಗಿಸುವ ಅಗತ್ಯ ಕನಿಷ್ಟ ಮಟ್ಟದಲ್ಲಿ ಕಂಡುಬಂದಿದೆ ಔಷಧದ ಪ್ರಾಯೋಗಿಕ ಪರೀಕ್ಷೆಯಲ್ಲಿ ಸಾಬೀತಾಗಿದೆ . ಕೊರೋನ ಸೋಂಕಿನ ಪರಿಣಾಮಕ್ಕೆ ಒಳಗಾದ ಜೀವಕೋಶಗಳ ಎಂದು ಆರೋಗ್ಯ ಇಲಾಖೆ ಹೇಳಿದೆ. ಹೈದರಾಬಾದ್ನ ಡಾ. ರೆಡ್ಡೀಸ್ ಲ್ಯಾಬೊರೇಟರಿಯ ಸಹಯೋಗದೊಂದಿಗೆ ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಆ್ಯಂಡ್ ಅಲಯ್ಡಿ ಸೈಯನ್ಸಸ್ (ಐಎನ್ಎಂಎಎಸ್) ಈ ಔಷಧವನ್ನು ಅಭಿವೃದ್ಧಿಗೊಳಿಸಿದೆ.